Rewa: ಗೋಡೆ ಕುಸಿದು ನಾಲ್ವರು ಮಕ್ಕಳ ಸಾವು
Rewa: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಟ್ಟಡವೊಂದರ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಕ್ಕಳು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಶಿಥಿಲಗೊಂಡ ಕಟ್ಟಡದ ಗೋಡೆ ಮಕ್ಕಳ ಮೇಲೆ ಬಿದ್ದಿದೆ. ರೇವಾ ಜಿಲ್ಲೆಯ ಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಘಟನೆ ನಡೆದಿದೆ.
ಶನಿವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಕಟ್ಟಡದ ಗೋಡೆಯೊಂದು ಕುಸಿದು 4 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಖಾಸಗಿ ಶಾಲೆಯೊಂದರ ಬಳಿ ಈ ದುರಂತ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸನ್‌ರೈಸ್ ಪಬ್ಲಿಕ್ ಶಾಲೆಯ ಮಕ್ಕಳು ಮನೆಗೆ ಹಿಂದಿರುಗುತ್ತಿದ್ದಾಗ ಗೋಡೆ ಕುಸಿದಿದೆ ಎಂದು ರೇವಾ ವಲಯದ ಪೊಲೀಸ್ ಮಹಾನಿರೀಕ್ಷಕ ಮಹೇಂದ್ರ ಸಿಂಗ್ ಸಿಕರ್ವಾರ್ ಹೇಳಿದ್ದಾರೆ. ಗೋಡೆ ಕುಸಿತದ ಸಮಯದಲ್ಲಿ ಆ ಮಕ್ಕಳು ತಮ್ಮ ಕೇರ್‌ಟೇಕರ್ ಜೊತೆಗೆ ನಡೆದುಕೊಂಡು ಹೋಗುತ್ತಿದ್ದರು.
ಅವಶೇಷಗಳಿಂದ ನಾಲ್ವರು ಮಕ್ಕಳನ್ನು ಹೊರತೆಗೆದಾಗ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಖಚಿತಪಡಿಸಿದ್ದಾರೆ. ಇದರ ಜೊತೆಗೆ ಮಹಿಳೆ ಮತ್ತು ಇನ್ನೊಂದು ಮಗುವಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೇವಾಗೆ ಕಳುಹಿಸಲಾಗಿದೆ.
ಮೃತರನ್ನು ಅಂಕಿತಾ ಗುಪ್ತಾ (5), ಮಾನ್ಯ ಗುಪ್ತಾ (7), ಸಿದ್ಧಾರ್ಥ್ ಗುಪ್ತಾ (5), ಮತ್ತು ಅನುಜ್ ಪ್ರಜಾಪತಿ (5) ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ದುರ್ಮರಣ
ಭೋಪಾಲ್: ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನೂ ನಡೆಸಿ ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಗಾಯಾಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟ ಮಕ್ಕಳು 10-15 ವರ್ಷದೊಳಗಿನವರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇನ್ನೂ ಘಟನೆ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸಾ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಾತ್ರೆ ಸೇವಿಸಿ ಬ್ರಿಟನ್ ವ್ಯಕ್ತಿ ಬೆಂಗಳೂರಿನಲ್ಲಿ ಸಾವಿಗೆ ಶರಣು!
ಬೆಂಗಳೂರು (ಆ.4): ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ರಿಟನ್ ದೇಶದ ಗೇವಿನ್ ಜೇಮ್ಸ್ ಯಂಗ್ (59) ಮೃತ ದುರ್ದೈವಿ. ಕೋರಮಂಗಲದ 7ನೇ ಹಂತದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ನಾಲ್ಕೈದು ದಿನಗಳ ಹಿಂದೆ ಅತಿಯಾದ ಮಾತ್ರೆಗಳ ಸೇವನೆಯಿಂದ ಜೇಮ್ಸ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಜೇಮ್ಸ್ ಅವರು, ಜುಲೈ ಮೊದಲ ವಾರ ನಗರಕ್ಕೆ ಆಗಮಿಸಿದ್ದರು. ಆನ್‌ಲೈನ್ ಮೂಲಕ ಕೋರಮಂಗಲದಲ್ಲಿ ಬಾಡಿಗೆ ಮನೆಗೆ ಪಡೆದು ಅವರು ನೆಲೆಸಿದ್ದರು. ಜು.27ರಂದು ತಮ್ಮ ಮನೆ ಮಾಲೀಕರಿಗೆ ಕರೆ ಮಾಡಿ ತನ್ನನ್ನು ಆ.1ವರೆಗೆ ತೊಂದರೆ ಮಾಡಬೇಡಿ ಎಂದು ಜೇಮ್ಸ್ ಹೇಳಿದ್ದರು. ಹೀಗಾಗಿ ಯಾರೂ ಆತನನ್ನು ಮಾತನಾಡಿಸಿರಲಿಲ್ಲ. ಕೊನೆಗೆ ಶನಿವಾರ ಬೆಳಗ್ಗೆ ಜೇಮ್ಸ್‌ಗೆ ಮನೆ ಮಾಲಿಕರು ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಮನೆ ಬಳಿ ಬಂದಾಗ ದುರ್ವಾಸನೆ ಬಂದಿದೆ. ಇದರಿಂದ ಆತಂಕಗೊಂಡ ಅವರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮಲಗುವ ಕೋಣೆಯ ಹಾಸಿಗೆ ಮೇಲೆ ಜೇಮ್ಸ್ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೃತನ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಆತ್ಮಹತ್ಯೆ ನಿರ್ಧಾರದ ಬಗ್ಗೆ ಅವರು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.