Trade Mark: ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಎಕ್ಕದ ಹೆಸರಿನ ಉಲ್ಲಂಘನೆ. ಉಡುಪಿ ನ್ಯಾಯಾಲಯದಿಂದ ಎಕ್ಕಮಾಲೆ ಎಣ್ಣೆ ಉತ್ಪಾದನೆ ಮತ್ತು ಮಾರಾಟಕ್ಕೆ ತಡೆಯಾಜ್ಞೆ!
Trade Mark: ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ರೇಂಜಾಳ ಗ್ರಾಮದ ಸುಧಾಕರ್ ಎಮ್ ಪೂಜಾರಿ ರವರ ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಹೊಂದಿರುವ ‘ಎಕ್ಕದ’ (Yekkada)ಎಂಬ ನೋವಿನ ಎಣ್ಣೆಯ ಟ್ರೇಡ್ ಮಾರ್ಕ ಗೆ ಸಂಬಂಧಪಟ್ಟಂತೆ, ಈ ಟ್ರೇಡ್ ಮಾರ್ಕ್ ಉಲ್ಲಂಘಿಸಿ ‘ಎಕ್ಕಮಾಲೆ'(Yekkamale Yenne) ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ನೋವಿನ ಎಣ್ಣೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಮೂಡಬಿದ್ರೆಯ ಸಂಜೀವಿನಿ ಆಯುರ್ವೇದಿಕ್ ಎಂಬ ಹೆಸರಿನಲ್ಲಿ ಎಕ್ಕಮಾಲೆ ಎಂಬ ನೋವಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೋಹಿದ್ದಿನ್ ಕುನ್ನಿ ಯಾನೆ ಎಂ ಕೆ ಗಾರ್ಡಡಿ ಯವರಿಗೆ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ತಡೆಯಾಜ್ಞೆ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ಮಾಡಿದೆ.
ಈ ಕುರಿತಂತೆ ಕಾರ್ಕಳದ ಸುಧಾಕರ್ ಪೂಜಾರಿಯವರು ಉಡುಪಿ ನ್ಯಾಯಾಲಯದಲ್ಲಿ ಟ್ರೇಡ್ ಮಾರ್ಕ್ ಕಾನೂನಿನ ಅನ್ವಯ ದಾವೆಯನ್ನು ಹೂಡಿದರು.
ದಾವೆ ಸಂಖ್ಯೆ o.s.0000001/2024 ರಲ್ಲಿ ಉಡುಪಿ ನ್ಯಾಯಾಲಯ ಈ ಆದೇಶ ನೀಡಿದೆ.
ಉಡುಪಿ ನ್ಯಾಯಾಲಯದಲ್ಲಿ ದಾವೆದಾರ ಸುಧಾಕರ್ ಎಂ ಪೂಜಾರಿ ಪರವಾಗಿ ಉಡುಪಿಯ ನ್ಯಾಯವಾದಿ ಮಂಜುನಾಥ್ .ವಿ ಹಾಗೂ ನವನೀತ್ ಡಿ. ಹಿಂಗಾಣಿ ವಾದಿಸಿದ್ದರು.
ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ 20 ವರ್ಷ ಕಠಿನ ಶಿಕ್ಷೆ
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷಗಳ ಕಠಿನ ಶಿಕ್ಷೆ ವಿಧಿಸಿದೆ.
ಬೆಳ್ತಂಗಡಿ ತಾಲೂಕು ಕೊಕ್ರಾಡಿಯ ಯೋಗೀಶ (26) ಶಿಕ್ಷೆಗೊಳಗಾದವನು. 2020ರಲ್ಲಿ ಆರೋಪಿ ಬಾಲಕಿಯನ್ನು ಪುಸಲಾಯಿಸಿಕೊಂಡು ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಾಲಕಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ವೃತ್ತ ನಿರೀಕ್ಷಕ ಶಿವ ಕುಮಾರ್ ಬಿ. ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 13 ಸಾಕ್ಷಿದಾರರನ್ನು ವಿಚಾರಿಸಿ 29 ದಾಖಲೆಗಳನ್ನು ಗುರುತಿಸಲಾಗಿತ್ತು.
ಡಿಎನ್‌ಎ ವರದಿಗಳು, ಸಾಕ್ಷ್ಯ, ಪೂರಕ ಸಾಕ್ಷ್ಯ ಪರಿಗಣಿಸಿ ಹಾಗೂ ವಾದ ವಿವಾದ ಆಲಿಸಿದ ನ್ಯಾಯಾಲಯವು ಆರೋಪಿತನ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಆ. 2ರಂದು ನ್ಯಾಯಾಧೀಶರಾದ ಮಾನು ಕೆ.ಎಸ್.ಅವರು ಆರೋಪಿಗೆ ಪೋಕ್ಸೋ ಕಾಯಿದೆಯಂತೆ 20 ವರ್ಷಗಳ ಕಠಿನ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.
ಅಲ್ಲದೆ ಸಂತ್ರಸ್ತರ ಪರಿಹಾರ ಯೋಜನೆಯಡಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 1,50,000 ರೂ. ಹಾಗೂ ಆಕೆಯ ಹೆಣ್ಣು ಮಗುವಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ವಾದ ಮಂಡಿಸಿದ್ದರು.