PM Kisan :ಪಿಎಂಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ವಿಶೇಷ ನೋಂದಣಿ ಅಭಿಯಾನವನ್ನು ದೇಶಾದ್ಯಂತ ಆರಂಭಿಸಲಾಗಿದೆ. ಅರ್ಹ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು 10 ದಿನಗಳ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿಯೂ ಈ ಯೋಜನೆ ಜಾರಿಯಲ್ಲಿದ್ದು, ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ. 6000 ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ನೀಡಲಾಗುತ್ತಿದ್ದು, ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರು ಈ ಯೋಜನೆಯ ವ್ಯಾಪ್ತಿಗೆ ಅರ್ಹರು.
ಅರ್ಹ ರೈತರ ನೋಂದಣಿಯೊಂದಿಗೆ ಈಗಾಗಲೇ ನೋಂದಣಿಯಾಗಿರುವ ರೈತರ ಬಾಕಿಯಿರುವ ಇ-ಕೆವೈಸಿ ಮಾಡಿಸಲು ಮತ್ತು ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವ ಮೂಲಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ರೈತರು ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್‍ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಪಿಎಂಕಿಸಾನ್ ಇ-ಕೆವೈಸಿ ಫೇಸ್ ರೆಕಗ್ನನೇಷನ್ ಆಪ್ ಮೂಲಕ ಇ-ಕೆವೈಸಿ ಮಾಡಿಸುವುದು.
ಯೋಜನೆಯ ಮಾಹಿತಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಡಿಜಿಟಲ್‌ನಿಂದಾಗಿ ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೆ ರೈತರಿಗೆ ಹಣ ನೇರವಾಗಿ ತಲುಪುತ್ತದೆ. ಫಲಾನುಭವಿಗಳನ್ನು ನೋಂದಾಯಿಸುವಲ್ಲಿ ಮತ್ತು ಪರಿಶೀಲಿಸುವಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಲಾಗುತ್ತದೆ. ಸರ್ಕಾರ 11 ಕೋಟಿಗೂ ಹೆಚ್ಚು ರೈತರಿಗೆ 2.60 ಲಕ್ಷ ಕೋಟಿ ರೂ.ಗಳನ್ನು ವಿತರಿಸಿದೆ.
ಯೋಜನೆಯನ್ನು ಫೆಬ್ರವರಿ 2019ರಲ್ಲಿ ಪ್ರಾರಂಭಿಸಲಾಯಿತು. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿ ಹಣವನ್ನು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಹೊಂದದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಲಾಗಿದೆ. ಕೃಷಿ ಇಲಾಖೆಯಿಂದ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಕೂಡ ಕೆಲ ರೈತ ಫಲಾನುಭವಿಗಳು ಇ-ಕೆವೈಸಿ ಮಾಡಿಸಿರುವುದಿಲ್ಲ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಗಳೊಂದಿಗೆ ಇ-ಕೆವೈಸಿ ಮಾಡಿಸಬಹುದು.
ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು.
ಫಲಾನುಭವಿಗಳು ಸ್ವತ: ತಾವೇ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್ ಒಟಿಪಿ ಪಡೆದು ಇ-ಕೆವೈಸಿ ಮಾಡಬಹುದು. ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಪಿಎಂ ಕಿಸಾನ್ ಇ-ಕೆವೈಸಿ ತ್ವರಿತವಾಗಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ (Play Store) ಡೌನ್ ಲೋಡ್ (Download) ಮಾಡಿಕೊಂಡು ಆಪ್ ಮೂಲಕ ಸ್ವತ: ಫಲಾನುಭವಿಗಳೇ ಮುಖ ಚಹರೆ ತೋರಿಸುವ ಮೂಲಕ (Facial Authentication) ಇ-ಕೆವೈಸಿ ಮಾಡಿಕೊಳ್ಳಬಹುದು.