ಅನೈತಿಕ ಸಂಬಂಧ ಶಂಕಿಸಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಗೆ ಮಚ್ಚು ಬೀಸಿದ ಪತಿ..!
ಬೆಂಗಳೂರು: ದೂರಾಗಿದ್ದ ಪತ್ನಿ ಮತ್ತೊಬ್ಬನೊಟ್ಟಿಗೆ ಹೋಗುವುದನ್ನು ಕಂಡ ಪತಿಯೊಬ್ಬ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆಯನ್ನು (Assault Case) ನಡೆಸಿದ್ದಾನೆ. ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿಗೆ ಮಚ್ಚಿನಿಂದ ಹೊಡೆದಿದ್ದಾನೆ. ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನೈಗರ್ (28) ಹಲ್ಲೆಗೊಳಗಾದವಳು. ಪತಿ ಶೇಕ್ ಮುಜೀಬ್ ಹಲ್ಲೆ ನಡೆಸಿದವನು. ನೈಗರ್ ಹಾಗೂ ಶೇಕ್ ಮುಜೀಬ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಕಲಹ ಉಂಟಾಗಿ ನಂತರ ಬೇರ್ಪಟ್ಟಿದ್ದರು. ಬೇರೆ ಬೇರೆಯಾಗಿ ವಾಸವಿದ್ದರು. ಈ ನಡುವೆ ನೈಗರ್ ಆರು ತಿಂಗಳ ನಂತರ ಮತ್ತೊಬ್ಬ ವ್ಯಕ್ತಿ ಸಲೀಂ ಎಂಬಾತನ ಜತೆ ಸಂಬಂಧ ಹೊಂದಿದ್ದಳು.
ಸೋಮವಾರ ಸಂಜೆ ಪತ್ನಿ ನೈಗರ್ ಸಲೀಂ ಜತೆಗೆ ಹೋಗುತ್ತಿದ್ದರು. ಇದನ್ನು ಕಂಡ ಶೇಕ್ ಮುಜೀಬ್ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಮಚ್ಚು ಬೀಸಿದ ರಭಸಕ್ಕೆ ನೈಗರ್ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಗಾಯಾಳನ್ನು ಹೆಚ್ಎಎಲ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ಜೆ.ಬಿ ನಗರ ಪೊಲೀಸರು ಆರೋಪಿ ಶೇಖ್ ಮುಜಿಬ್‌ನನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ 307 ಕೇಸ್ ದಾಖಲಾಗಿದೆ.