ಕಾರ್ಕಳ ನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಶೃತಿನ್ ಶೆಟ್ಟಿ ನಾಪತ್ತೆ!
ಪಡುಬಿದ್ರಿ ಅಕ್ಟೋಬರ್ 21: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನಾಪತ್ತೆಯಾಗಿರುವ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾಗಿರವವರು ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್, ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) . ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಪೂಜಾ ಶೆಟ್ಟಿ ಶುಕ್ರವಾರದಂದು ದೂರು ದಾಖಲಿಸಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೃತಿನ್ ಶೆಟ್ಟಿ ಅಕ್ಟೋಬರ್ 16ರಂದು ರಜೆ ಹಾಕಿದ್ದು ತಾನು ಮನೆಗೆ ಬರುತ್ತಿರುವುದಾಗಿ ಪತ್ನಿಗೆ ಮೊಬೈಲ್ ಮೂಲಕ ತಿಳಿಸಿದ್ದರು. ಆದರೆ ಮನೆಗೂ ಬಾರದೆ, ಕಾರ್ಕಳ ನಗರ ಠಾಣೆಗೂ ಹೋಗದೆ ಶೃತಿನ್ ಶೆಟ್ಟಿ ನಾಪತ್ತೆಯಾಗಿದ್ದಾರೆ. ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಭಡ್ತಿಗೊಂಡು ಕಾರ್ಕಳ ನಗರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಆಗಿ ಬಂದಿದ್ದರು. ಸದ್ಯ ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. 178ಸೆ.ಮೀ. ಎತ್ತರ, ದೃಢಕಾಯದ ಶೃತಿನ್ ಶೆಟ್ಟಿ ತುಳು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತಾಡುತ್ತಾರೆ. ಇವರ ಗುರುತು, ಪರಿಚಯ ಯಾರಿಗಾದರೂ ಇದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (0820 2555452)ಯನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.
ಮಂಗಳೂರು – ಬಿಲ್ ಪಾವತಿಗೆ 15% ಕಮಿಷನ್ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡ ಕೃಷಿ ಇಲಾಖೆ ಅಧಿಕಾರಿ
ಮಂಗಳೂರು ಅಕ್ಟೋಬರ್ 21: ನಿವೃತ್ತ ಅರಣ್ಯಾಧಿಕಾರಿಯೊಬ್ಬರಿಂದ ಬಿಲ್ ಪಾವತಿ ಗೆ ಬಿಲ್ ಮೊತ್ತದ 15 % ಕಮಿಷನ್ ಲಂಚ ಕೇಳಿದ ಮಹಿಳಾ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ.
2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC 20” ಯೋಜನೆಯಡಿ ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸರಕಾರದ ವತಿಯಿಂದ ಉಚಿತವಾಗಿ ವಿವಿಧ ಜಾತಿ ಅರಣ್ಯ ಮತ್ತು ತೋಟಗಾರಿಕಾ ಗಿಡಗಳನ್ನು ನೀಡಲಾಗಿತ್ತು. ಇದನ್ನು ಕೆಲವು ನರ್ಸರಿಗಳ ಮೂಲಕ ಪಡೆದುಕೊಳ್ಳಲಾಗಿತ್ತು, ಅಲ್ಲದೆ ಅರಣ್ಯ ಇಲಾಖೆ ಗುತ್ತಿಗೆದಾರರಿಂದ ಗಿಡಗಳನ್ನು ನಾಟಿ ಮಾಡಿಸಿತ್ತು. ಈ ಒಟ್ಟಾರೆ ಕಾಮಗಾರಿಗೆ 50 ಲಕ್ಷದಷ್ಟು ಹಣ ಸರಕಾರದಿಂದ ಬರಬೇಕಾಗಿತ್ತು.
ಈ ಹಿನ್ನಲೆ ಕೃಷಿ ಇಲಾಖೆಯಲ್ಲಿ ಅಂದು ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗಿರುವ ಪರಮೇಶ್ ಎನ್.ಪಿ ಅವರು ಬಿಲ್ ಬಾಕಿ ಪಾವತಿಗೆ ಮಂಗಳೂರು ವಿಭಾಗದ ಉಪಕೃಷಿ ನಿರ್ದೇಶಕರಾದ ಶ್ರೀಮತಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ವೇಳೆ ಅಧಿಕಾರಿ ಭಾರತಮ್ಮ ಅವರು ಬಿಲ್ ಪಾವತಿಸಬೇಕಾದರೆ ಬಿಲ್ ಮೊತ್ತದ 15 % ಹಣವನ್ನು ಮುಂಗಡವಾಗಿ ನನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೇ ನಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನಲೆ ಪರಮೇಶ್ ಅವರು ಅಕ್ಟೋಬರ್ 20 ರಂದು ಮತ್ತೆ ಅಧಿಕಾರಿ ಭಾರತಮ್ಮ ಅವರ ಹತ್ತಿರ ಮಾತನಾಡಿದಾಗ ಬಿಲ್ ಪಾವತಿಗೆ 1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಮೇಶ್ ಅವರು ಲೋಕಾಯುಕ್ತ ದೂರು ನೀಡಿದ್ದರು. ಇಂದು ಮಂಗಳೂರು ಉಪ ಕೃಷಿ ನಿರ್ದೇಶಕಿಯಾದ ಶ್ರೀಮತಿ ಭಾರತಮ್ಮ ಅವರು ಪರಮೇಶ್ ಅವರಿಂದ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.