IPL 2024 : ಮಾರ್ಚ್ 22ರಿಂದ ಐಪಿಎಲ್ ಆರಂಭ; ಭಾರತದಲ್ಲೆ ನಡೆಯಲಿದೆ ಪಂದ್ಯಾವಳಿ..!
ನಿರೀಕ್ಷೆಯಂತೆ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿ ಮಾರ್ಚ್ 22ರಿಂದ ಆರಂಭಗೊಳ್ಳಲಿದೆ ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಮಂಗಳವಾರ ಪಿಟಿಐಗೆ ತಿಳಿಸಿದರು. ಲೋಕಸಭಾ ಚುನಾವಣೆ ಇದ್ದರೂ ಕೂಡ ಟೂರ್ನಿ ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿದೆ ಎಂದು ಖಚಿತಪಡಿಸಿದರು.
ಮಂಗಳವಾರ ಪಿಟಿಐ ಜತೆ ಮಾತನಾಡಿದ ಧುಮಾಲ್,17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22ರಿಂದ ಆರಂಭಗೊಳ್ಳಲಿದೆ. ಲೋಕಸಭೆ ಚುನಾವಣೆ ಇರುವ ಕಾರಣ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಮಾತ್ರ ಆರಂಭದಲ್ಲಿ ಪ್ರಕಟಿಸಲಾಗುವುದು ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಚುನಾವಣೆ ದಿನಾಂಕ ಪ್ರಕಟದ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದರು.
“ನಾವು ಮಾರ್ಚ್ 22 ರಂದು ಪಂದ್ಯಾವಳಿಯನ್ನು ಪ್ರಾರಂಭಿಸಲು ನೋಡುತ್ತಿದ್ದೇವೆ. ನಾವು ಸರ್ಕಾರಿ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಮೊದಲು ಆರಂಭಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಸಂಪೂರ್ಣ ಪಂದ್ಯಾವಳಿಯು ಭಾರತದಲ್ಲಿ ನಡೆಯಲಿದೆ” ಎಂದು ಧುಮಾಲ್ ಹೇಳಿದರು.
2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಇದೇ ಕಾರಣದಿಂದ ಈ ಬಾರಿಯ ಆವೃತ್ತಿಯೂ ಕೂಡ ಭಾರತದ ಬದಲಾಗಿ ವಿದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು ಇದೀಗ ಐಪಿಎಲ್ ಅಧ್ಯಕ್ಷರು ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎಂದು ಹೇಳುವ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ವಿಶೇಷತೆ ಏನು? ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ 20 ಕೋಟಿ ರೂ.ಗಳ ಗಡಿ ದಾಟಿದ್ದಾರೆ. ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿತು, ಈ ದಾಖಲೆಯು ಕೇವಲ 30 ನಿಮಿಷಗಳ ಕಾಲ ಉಳಿಯಿತು, ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್ಗೆ 24.75 ಕೋಟಿ ರೂ.ಗಳನ್ನು ಪಾವತಿಸಿತು. ಇದೇ ವೇಳೆ ಅನ್ಕ್ಯಾಪ್ಡ್ ಭಾರತೀಯರಾದ ಶುಭಂ ದುಬೆ ಮತ್ತು ಸಮೀರ್ ರಿಜ್ವಿ ಕೂಡ ಗಮನ ಸೆಳೆದರು.
30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರನ್ನು ಒಟ್ಟು 230.45 ಕೋಟಿ ರೂ.ಗೆ 10 ಫ್ರಾಂಚೈಸಿಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕಂಡಿದ್ದವು. ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿತ್ತು.