India Hockey win bronze: ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ!
India Hockey win bronze: ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಪುರುಷರ ಹಾಕಿಯಲ್ಲಿ ಸ್ಪೈನ್ ತಂಡವನ್ನು ಮಣಿಸಿದ ಭಾರತ ಕಂಚಿನ ಪದಕಕ್ಕೆ (India Hockey win bronze) ಮುತ್ತಿಟ್ಟಿದೆ
2-1 ಗೋಲುಗಳಿಂದ ಸ್ಪೇನ್ ಮಣಿಸಿದ ಭಾರತ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಇದೀಗ ಪ್ಯಾರಿಸ್ ಅಂಗಣದಲ್ಲಿ ಪದಕದ ಬಣ್ಣ ಬದಲಾಯಿಸಲು ವಿಫಲಗೊಂಡರೂ, ಕಂಚಿನ ಪದಕ ಗೆದ್ದುಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದೆ.
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಎರಡೂ ತಂಡಗಳು ಗೋಲ್ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್ ಮುನ್ನಡೆಯನ್ನು ಪಡೆದುಕೊಂಡಿತು.
ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ತಂಡ ಗೆಲುವು ಸಾಧಿಸಿತು.
ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್ ತಲುಪಲು ವಿಫಲಗೊಂಡಿದ್ದ ಟೀಮ್ ಇಂಡಿಯಾ, ಗುರುವಾರ (ಆಗಸ್ಟ್ 8) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅಪಾಯಕಾರಿ ಸ್ಪೇನ್ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದ 4ನೇ ಕಂಚಿನ ಪದಕ ಆಗಿದೆ. ಇದರ ಹೊರತಾಗಿ 8 ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಭಾರತ ಗೆದ್ದಿದೆ. ಅಂದಹಾಗೆ 1980ರ ಬಳಿಕ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಚಿನ್ನ ಗೆದ್ದಿಲ್ಲ.
ಭಾರತದ ಹಾಕಿ ತಂಡದ ಈ ಯಶಸ್ಸಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ 4ಕ್ಕೆ ಏರಿದೆ. ಶೂಟಿಂಗ್‌ನಲ್ಲಿ ಮನು ಭಾಕರ್ 2 ಕಂಚು ಗೆದ್ದರೆ, ಶೂಟರ್ ಸ್ವಪ್ನಿಲ್ ಕುಸಾಲೆ 3ನೇ ಕಂಚು ತಂದುಕೊಟ್ಟಿದ್ದರು. ಮನು ಭಾಕರ್ 10 ಮೀ. ಪಿಸ್ತೂಲ್‌ನ ವೈಯಕ್ತಿಕ ಕಂಚು ಮತ್ತು ಮಿಶ್ರ ಪಿಸ್ತೂಲ್ ಶೂಟಿಂಗ್‌ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚು ಗೆದ್ದುಕೊಟ್ಟಿದ್ದರು. ಈಗ ಹಾಕಿ ತಂಡ 4ನೇ ಕಂಚನ್ನು ಜೋಡಿಸಿದೆ.
ಗೋಲ್ ಕೀಪರ್ ಶ್ರೀಜೇಶ್ಗೆ ವಿದಾಯ
ಒಲಿಂಪಿಕ್ಸ್ ಉದ್ದಕ್ಕೂ ಭಾರತಕ್ಕೆ ಗೆಲುವಿನಲ್ಲಿ ನೆರವಾಗಿದ್ದು ಗೋಲ್ ಕೀಪರ್ ಶ್ರೀಜೇಶ್. ಹೀಗಾಗಿ ಈ ಪದಕದೊಂದಿಗೆ ಅವರಿಗೆ ಉತ್ತಮ ವಿದಾಯ ದೊರಕಿದೆ. ಒಲಿಂಪಿಕ್ಸ್ ಆರಂಭಕ್ಕೆ ಮುನ್ನವೇ ಅವರು ಇದು ನನಗೆ ಕೊನೇ ಅಂತಾರಾಷ್ಟ್ರೀಯ ಟೂರ್ನಿ ಎಂದು ಹೇಳಿದ್ದರು. ಹೀಗಾಗಿ ಅವರು ಇಲ್ಲಿಗೆ ತಮ್ಮ ವೃತ್ತಿ ಕ್ರೀಡೆಯನ್ನು ಮುಗಿಸಲಿದ್ದಾರೆ. ಹೀಗಾಗಿ ತಂಡದ ಆಟಗಾರರು ಉತ್ತಮ ವಿದದಾಯ ಎಂದು ಹೇಳಲಾಗಿದೆ.
ಭಾರತಕ್ಕೆ 4ನೇ ಪದಕದ ಭರವಸೆ; ಕುಸ್ತಿ ವಿಭಾಗದಲ್ಲಿ ಸೆಮೀಸ್ಗೇರಿದ ಅಮನ್ ಸೆಹ್ರಾವತ್:
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ. 57 ಕೆಜಿ ಕುಸ್ತಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮನ್ ಸೆಹ್ರಾವತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅಮನ್ ಸೆಹ್ರಾವತ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಬೇನಿಯನ್ ಕುಸ್ತಿಪಟುವನ್ನು 12-0 ಅಂತರದಿಂದ ಸೋಲಿಸಿದರು.
ಈ ಗೆಲುವಿನೊಂದಿಗೆ ಅಮನ್ ಈಗ ಪದಕಕ್ಕೆ ಒಂದು ಹೆಜ್ಜೆ ದೂರವಾಗಿದ್ದಾರೆ. ಇಂದು ರಾತ್ರಿ 9.45ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಗೆದ್ದು, ಫೈನಲ್ ತಲುಪಿದರೆ ಅವರಿಗೆ ಬೆಳ್ಳಿ ಪದಕ ಖಚಿತವಾಗಲಿದೆ.
ಒಂದು ವೇಳೆ ಫೈನಲ್ ಪಂದ್ಯದಲ್ಲಿ ಗೆದ್ದರೆ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಸಾಧ್ಯವಾದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ.
21 ವರ್ಷದ ಅಮನ್ ಸೆಹ್ರಾವತ್ ಈಗಾಗಲೇ ಹಲವು ದೊಡ್ಡ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದಾರೆ. ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಅಮನ್, ಅದೇ ವರ್ಷ ಝಾಗ್ರೆಬ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಇದಲ್ಲದೆ ಅಮನ್, 2022ರಲ್ಲಿ ನಡೆದಿದ್ದ ಬುಡಾಪೆಸ್ಟ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು. ಆದರೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅಮನ್ ಸೆಹ್ರಾವತ್ ಈಗ 57 ಕೆಜಿ ವಿಭಾಗದಲ್ಲಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ ಅಮನ್ ಸೆಹ್ರಾವತ್ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಮ್ಯಾಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದರು.ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10-0 ಅಂತರದಲ್ಲಿ ವಿಶ್ವದ 38 ನೇ ಶ್ರೇಯಾಂಕದ ಕುಸ್ತಿಪಟುವನ್ನು ಸೋಲಿಸುವಲ್ಲಿ ಅಮನ್ ಯಶಸ್ವಿಯಾಗಿದ್ದರು. ಇದೀಗ ಅಮನ್ ಸೆಹ್ರಾವತ್ ಸೆಮಿ-ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ರೇ ಹಿಗುಚಿ ವಿರುದ್ಧ ಸೆಣಸಾಡಲಿದ್ದಾರೆ.