Bangladesh: ಬಾಂಗ್ಲಾದೇಶದಲ್ಲಿ ಅರಾಜಕತೆ. ದೇಶ ಬಿಟ್ಟು ತೆರಳಿದ ಶೇಕ್ ಹಸೀನಾ!
Bangladesh: ಭಾರತದ ಮತ್ತೊಂದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ( Bangladesh ) ಅರಾಜಕತೆ ಉಂಟಾಗಿದೆ. ದೇಶದ ಪ್ರಧಾನಿ ಶೇಕ್ ಹಸೀನಾ (sheik Hasina) ದೇಶ ಬಿಟ್ಟು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಮೂಲಕ ದೇಶ ಬಿಟ್ಟು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶದಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದ ಅರಾಜಕತೆ ಉಂಟಾಗಿದೆ ಎನ್ನಲಾಗಿದೆ.
ಸೇನೆಯು ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಘೋಷಿಸಿದ್ದಾರೆ.
ರಾಜೀನಾಮೆಗೆ ಒತ್ತಡ ಹೆಚ್ಚಾದ ನಂತರ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪರಾರಿಯಾಗಿದ್ದಾರೆ. ಢಾಕಾ ತೊರೆದ ನಂತರ ಅವರು ಸಿ -130 ಸೇನಾ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ.
ಭಾರತೀಯ ವಾಯುಪಡೆಯ C-17 ಮತ್ತು C-130J ಸೂಪರ್ ಹರ್ಕ್ಯುಲಸ್ ವಿಮಾನ ಹ್ಯಾಂಗರ್‌ಗಳ ಬಳಿ ಅವರ ವಿಮಾನವನ್ನು ನಿಲ್ಲಿಸಲಾಗುತ್ತದೆ. ಆ ವಿಮಾನ ಭಾರತೀಯ ವಾಯುಪ್ರದೇಶದ ಪ್ರವೇಶದಿಂದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬರುವವರೆಗೂ ಭಾರತೀಯ ವಾಯುಪಡೆ ಮತ್ತು ಭದ್ರತಾ ಏಜೆನ್ಸಿಗಳು ಮೇಲ್ವಿಚಾರಣೆ ಮಾಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ, ವಾಕರ್-ಉಜ್-ಝಮಾನ್, ಶಾಂತಿ ಕಾಪಾಡಲು ಜನತೆಗೆ ಕರೆ ನೀಡಿದರು. ಗಲಭೆ ಸಂಬಂಧಿತ ಪ್ರತಿ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಇಂದು ರಾತ್ರಿಯೊಳಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಮಿಲಿಟರಿ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.
“ಸೇನೆಯಲ್ಲಿ ನಂಬಿಕೆ ಇಡಿ. ಎಲ್ಲಾ ಹತ್ಯೆಗಳನ್ನು ತನಿಖೆ ಮಾಡುತ್ತೇವೆ, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಗುಂಡಿನ ದಾಳಿಯಲ್ಲಿ ಸೇನೆ ಮತ್ತು ಪೊಲೀಸರು ಪಾಲ್ಗೊಳ್ಳಬಾರದು ಎಂದು ಆದೇಶಿಸಿದ್ದೇನೆ. ಈಗ ಶಾಂತವಾಗಿದ್ದು, ನಮಗೆ ನೆರವಾಗಬೇಕಾಗಿರುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೇನಾ ಮುಖ್ಯಸ್ಥರು, ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ), ಜಾತಿಯಾ ಪಕ್ಷ, ಜಮಾತ್-ಎ-ಇಸ್ಲಾಮಿಯ ಪ್ರತಿನಿಧಿಗಳನ್ನು ಭೇಟಿಯಾಗಿರುವುದಾಗಿ ದೃಢಪಡಿಸಿದರು. ಶಿಕ್ಷಕರಾದ ಅಫಿಸ್ ನಜ್ರುಲ್ ಮತ್ತು ಜೊನಾಯೆತ್ ಸಾಕಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಬಾಂಗ್ಲಾದೇಶದ ಮಾಧ್ಯಮ ಮೂಲಗಳನ್ನು ಉಲ್ಲೇಖಿಸಿ ANI ಸುದ್ದಿಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಈಗ ಬಂಗಭಬನ್ ಗೆ (ರಾಷ್ಟ್ರಧ್ಯಕ್ಷರ ಕಚೇರಿ) ಹೋಗುತ್ತೇವೆ. ಮಧ್ಯಂತರ ಸರ್ಕಾರ ರಚನೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳು ಶಾಂತಚಿತ್ತರಾಗಿರಿ. ದೇಶದಾದ್ಯಂತ ಕರ್ಫ್ಯೂ ವಿಧಿಸುವ ಅಥವಾ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಶೇಕ್ ಹಸೀನಾ ಢಾಕಾ ತೊರೆದ ನಂತರ ಅವರ ಅರಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರರು, ಪಿಠೋಪಕರಣಗಳು, ಗಾಜುಗಳನ್ನು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಸರ್ಕಾರದ ವಿರೋಧಿ ಪ್ರತಿಭಟನೆಯ ಪರಾಕಾಷ್ಠೆಯಾಗಿದೆ. ಹಸೀನಾ ಅವರ ಅಧಿಕೃತ ನಿವಾಸದ ಗೇಟ್‌ಗಳನ್ನು ಮುರಿದು ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.