Glen Maxwell: 109 ಮೀಟರ್ ದೂರದ ಸಿಕ್ಸರ್ ಸಿಡಿಸಿದ ಗ್ಲೆನ್ ಮ್ಯಾಕ್ಸ್ವೆಲ್; ಇಲ್ಲಿದೆ ವಿಡಿಯೋ
ಸಿಡ್ನಿ: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20(Australia vs West Indies 2nd T20I) ಪಂದ್ಯದಲ್ಲಿ ಶತಕ ಬಾರಿಸುವ ಜತೆಗೆ ಬಹು ದೂರದ ಸಿಕ್ಸರ್ ಬಾರಿಸಿಯೂ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಅಲ್ಜಾರಿ ಜೋಸೆಫ್ ಎಸೆತದಲ್ಲಿ ಮ್ಯಾಕ್ಸ್ವೆಲ್ ಬರೋಬ್ಬರಿ 109 ಮೀಟರ್ ದೂರದ ಸಿಕ್ಸರ್ ಬಾರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಈ ಸಿಕ್ಸರ್ ಬಾರಿಸುವ ವೇಳೆ ಮ್ಯಾಕ್ಸ್ವೆಲ್ 41 ರನ್ ಗಳಿಸಿದ್ದರು. ಸಿಕ್ಸರ್ ನೆರವಿನಿಂದ 47 ರನ್ ಕಲೆಹಾಕಿದರು. ಆ ಬಳಿಕವೂ ಹೊಡಿ ಬಡಿ ಆಟವಾಡಿದ ಮ್ಯಾಕ್ಸ್ವೆಲ್ ಕೇವಲ 50 ಎಸೆತಗಳಲ್ಲಿ 100 ರನ್ ಪೂರ್ತಿಗೊಳಿಸಿದರು. ಮೈದಾನದ ಮೂಲೆ ಮೂಲೆಗೂ ಎಡ-ಬಲ ಬ್ಯಾಟಿಂಗ್ ಶೈಲಿಯಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 55 ಎಸೆತಗಳಲ್ಲಿ 120 ರನ್ ಹೊಡೆದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ವೇಳೆ ಬರೋಬ್ಬರಿ 12 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಯಿತು.
109 metres!
— cricket.com.au (@cricketcomau) February 11, 2024
Massive from Maxwell #AUSvWI pic.twitter.com/BFtUxWClEl
ಮ್ಯಾಕ್ಸ್ವೆಲ್ ಅವರು ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ 5 ಶತಕ ಬಾರಿಸಿದ ರೋಹಿತ್ ಶರ್ಮ ಅವರ ದಾಖಲೆಯನ್ನು ಸರಿಗಟ್ಟಿದರು. ಇದೀಗ ಉಭಯ ಆಟಗಾರರು ಕೂಡ 5 ಶತಕ ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದ ಅಗ್ರ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ವೆಲ್ ಅವರ ಈ ಬ್ಯಾಟಿಂಗ್ ಸಾಹಸದಿಂದ ಆಸ್ಟ್ರೇಲಿಯಾ 34 ರನ್ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
Most Hundreds in T20I:
— Johns. (@CricCrazyJohns) February 11, 2024
Glenn Maxwell - 5* (94 innings)
Rohit Sharma - 5 (143 innings) pic.twitter.com/38HMakhBJL
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್ ತಂಡ 14 ರನ್ಗಳಿಸುವಷ್ಟರಲ್ಲಿ ಆಸೀಸ್ ತಂಡದ ಮೊದಲ ವಿಕೆಟ್ ಕಿತ್ತರೂ ಕೂಡ ಆ ಬಳಿಕ ಲಯ ಕಳೆದುಕೊಂಡು ಸರಿಯಾಗಿ ದಂಡಿಸಿಕೊಂಡರು. ಆಸೀಸ್ ಕೇವಲ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಬ್ಯಾಟಿಂಗ್ ನಡೆಸಿ 9 ವಿಕೆಟ್ಗೆ 207ರನ್ ಬಾರಿಸಲಷ್ಟೇ ಶಕ್ತವಾಯಿತು. ಮೊದಲ ಮೂವರು ಬ್ಯಾಟರ್ಗಳಾದ ಬ್ರಾಂಡನ್ ಕಿಂಗ್(5), ಜಾನ್ಸನ್ ಚಾರ್ಲ್ಸ್(24) ಮತ್ತು ನಿಕೋಲಸ್ ಪೂರನ್(18) ಅಗ್ಗಕ್ಕೆ ಔಟಾದದ್ದು ತಂಡದ ಸೋಲಿಗೆ ನೇರ ಕಾರಣವಾಯಿತು. ಇದರಲ್ಲಿ ಕನಿಷ್ಠ ಒಬ್ಬರಾದರೂ 50 ರನ್ ಬಾರಿಸುತ್ತಿದ್ದರೆ ಪಂದ್ಯವನ್ನು ಆರಾಮವಾಗಿ ಗೆಲ್ಲಬಹುದಿತ್ತು.
ನಾಯಕ ರೋವ್ಮನ್ ಪೊವೆಲ್ ಏಕಾಂಗಿಯಾಗಿ ಹೋರಾಟ ನಡೆಸಿ 63 ರನ್ ಬಾರಿಸಿದರು. ಆ್ಯಂಡ್ರೆ ರಸೆಲ್ 37 ರನ್ ಬಾರಿಸಿ ಮಾರ್ಕಸ್ ಸ್ಟೋಯಿನಿಸ್ಗೆ ವಿಕೆಟ್ ಒಪ್ಪಿಸಿದರು. ಜಾಸನ್ ಹೋಲ್ಡರ್ ಅಜೇಯ 28 ರನ್ ಬಾರಿಸಿದರೂ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇತ್ತಂಡಗಳ ನಡುವಣ ಮೂರನೇ ಹಾಗು ಅಂತಿಮ ಟಿ20 ಪಂದ್ಯ ಫೆಬ್ರವರಿ 13ರಂದು ನಡೆಯಲಿದೆ. ಈ ಪಂದ್ಯದಲ್ಲಾದರೂ ಗೆದ್ದು ವಿಂಡೀಸ್ ವೈಟ್ ವಾಶ್ ಮುಖಭಂಗದಿಂದ ಪಾರಾಗಲಿದೆಯಾ ಎಂದು ಕಾದು ನೋಡಬೇಕಿದೆ.