ಬೆಳ್ತಂಗಡಿ : ರಸ್ತೆ ದಾಟುತ್ತಿದ್ದ ವೇಳೆ ಪಿಕಪ್ ಡಿಕ್ಕಿ ; ಬಾಲಕ ಮೃತ್ಯು!
ಬೆಳ್ತಂಗಡಿ ಅಕ್ಟೋಬರ್ 18: ರಸ್ತೆ ದಾಟುತ್ತಿದ್ದ ಬಾಲಕನಿಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನಪ್ಪಿದ ಘಟನೆ ಲಾಯಿಲದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪಾರಂಕಿ ಗ್ರಾಮದ ಅರ್ತಿಲ ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ಮಹಮ್ಮದ್ ರಂಝೀನ್ (10) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಲಾಯಿಲದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ ಅಂಗಡಿಗೆ ಹೋಗಿ ಲಾಯಿಲ ಜಂಕ್ಷನ್ ನಲ್ಲಿ ವಾಪಾಸ್ ರಸ್ತೆ ದಾಟುತ್ತಿದ್ದ ವೇಳೆ ಉಜಿರೆಯಿಂದ ಬಂದ ಪಿಕಪ್ ಢಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಂದಾಪುರ: ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 15 ಪ್ರಯಾಣಿಕರಿಗೆ ಗಾಯ
ಪ್ರಯಾಣಿಕರ ಆಕ್ಷೇಪಗಳ ನಡುವೆಯೂ ನಿರ್ಲಕ್ಷ್ಯ ತೋರಿದ ಚಾಲಕನ ಅತೀ ವೇಗದಿಂದ ಖಾಸಗಿ ಬಸ್ ಒಂದು ಹೆದ್ದಾರಿ ನಡುವಿನ ಡಿವೈಡರ್ ನಲ್ಲಿದ್ದ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಪಲ್ಟಿಯಾಗಿ ಹದಿನೈದು ಜನ ಪ್ರಯಾಣಿಕರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಟೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ
ಕುಂದಾಪುರದಿಂದ ಬೈಂದೂರಿಗೆ ಹೋಗುವ ಲೋಕಲ್ ಎಪಿಎಂ ಬಸ್ ಸಂಜೆ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಹೊರಟಿತ್ತು. ಆರಂಭದಲ್ಲಿಯೇ ಬಸ್ ಚಾಲಕನ ಅತೀ ವೇಗಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗಾಯಗೊಂಡ ಪ್ರಯಾಣಿಕರು ಹೇಳಿದ್ದಾರೆ. ಆದರೆ ಚಾಲಕ ನಿರ್ಲಕ್ಷ್ಯ ತೋರಿದ್ದನೆನ್ನಲಾಗಿದೆ. ಕುಂದಾಪುರದಿಂದ ಅಪಘಾತ ನಡೆದ ಸ್ಥಳಕ್ಕೆ ಸುಮಾರು ಎಂಟು ಕಿ.ಮೀ ದೂರವಿದ್ದು ಐದು ಕಡೆ ನಿಲುಗಡೆಯಿದೆ. ಆದರೆ ಚಾಲಕ ನಿಲುಗಡೆ ಸೇರಿ ಕೇವಲ ಐದು ನಿಮಿಷದಲ್ಲಿ ಕುಂದಾಪುರದಿಂದ ಅಪಘಾತ ನಡೆದ ಸ್ಥಳ ತಲುಪಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇತ್ತ ಗಾಯಗೊಂಡ ಸುಮಾರು 15 ಪ್ರಯಾಣಿಕರನ್ನು ಕುಂದಾಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಒಂಭತ್ತು ತಿಂಗಳ ತುಂಬು ಗರ್ಭಿಣಿಯೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಅವರಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿಯ ಆಪತ್ಬಾಂಧವ ಅಂಬ್ಯುಲೆನ್ಸಿನ ಇಬ್ರಾಹಿಂ ಗಂಗೊಳ್ಳಿ ಹಾಗೂ ಬಿಜೆಪಿ ಮುಖಂಡ ಶರತ್ ಶೆಟ್ಟಿ ಉಪ್ಪುಂದ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ತಪ್ಪಿತಸ್ಥ ಚಾಲಕನ ನಿರ್ಲಕ್ಷ್ಯತನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.