ಮೈಸೂರು ಚಲೋ ಪಾದಯಾತ್ರೆ: ಕರ್ಮ ರಿಟರ್ನ್ಸ್ ಎಂದ ಜನಾರ್ದನ ರೆಡ್ಡಿ!
ಮೈಸೂರು ಚಲೋ: ಬಳ್ಳಾರಿ ಗಣಿಧಣಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ತೊಡೆ ತಟ್ಟಿ, ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅದೇ ಸಿದ್ದರಾಮಯ್ಯ ವಿರುದ್ಧ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅಬ್ಬರಿಸಿದ್ದಾರೆ. ಕರ್ಮ ರಿಟರ್ನ್ಸ ಆಗಿದೆ ಅಂತಾ ರೆಡ್ಡಿ ಕುಟುಕಿದರು. ಇನ್ನೂ ಆರ್.ಅಶೋಕ್, ವಿಜಯೇಂದ್ರ ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಸವಾಲು ಹಾಕಿದ್ದಾರೆ.
ಬೆಂಗಳೂರಿನಿಂದ ಮೈಸೂರುವರೆಗೆ ಜೆಡಿಎಸ್ ಬಿಜೆಪಿ ಹಮ್ಮಿಕೊಂಡಿರುವ ‘ಮೈಸೂರು ಚಲೋ ಪಾದಯಾತ್ರೆ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.
ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದರು.
ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ವಚನ ಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಟೀಕಿಸಿದರು.
ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯನವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ ಎಂದು ಒತ್ತಾಯಿಸಿದರು. ಈ ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂಟುನೆಪ ಬೇಡ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ಸಿನ ಡಿಎನ್ಎಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಆದರೆ, ವಾಜಪೇಯಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ ಎಂದರು. ಕಲ್ಲಿದ್ದಲು, 2 ಜಿ ಸೇರಿ ಅನೇಕ ಹಗರಣಗಳು ಆಗ ನಡೆದಿದ್ದವು. ಈಗ ಸಿದ್ದರಾಮಯ್ಯನವರು ಇಂಥ ಹಗರಣಗಳನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರೇ ಈ ಹಗರಣ ನಿಮ್ಮ ಕೈಯಿಂದಲೇ ನಡೆದಿದೆ. ಭ್ರಷ್ಟತನ ಮುಚ್ಚಿಹಾಕಲು ರಾಜ್ಯಪಾಲರನ್ನು ಬೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಇದರಲ್ಲಿ ಪಾಲುದಾರಿಕೆ ಪಡೆದಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ನಿಂದ ‘ಜನಾಂದೋಲನ’ ಕೌಂಟರ್
ಕೆಂಗೇರಿಯಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಿ ದೋಸ್ತಿಗಳು ಅಬ್ಬರಿಸಿದ್ದರು. ಅತ್ತ ಪಾದಯಾತ್ರೆಗೆ ಕೌಂಟರ್ ಆಗಿ ರಾಮನಗರದಲ್ಲಿ ಕಾಂಗ್ರೆಸ್ ಕಲಿಗಳು ಜನಾಂದೋಲನ ಸಭೆ ನಡೆಸಿದರು. ಬಿಜೆಪಿ ಕಾಲದಲ್ಲಿ ನಡೆದಿದ್ದು ಎನ್ನಲಾದ ಹಗರಣಗಳ ಪೋಸ್ಟರ್ ಹಿಡಿದು ಆಕ್ರೋಶ ಹೊರಹಾಕಿದ್ದು, ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಅತ್ತ ಹಾಸನದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ-ಜೆಡಿಎಸ್ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.
ಮುಡಾ ಹಗರಣದ ಮೊದಲ ದಿನದ ಯುದ್ಧ ಇಂದಿಗೆ ಮುಕ್ತಾಯವಾಗಿದೆ. ಮೊದಲ ದಿನವೇ ನಾಯಕರು ಅಬ್ಬರಿಸಿದ್ದಾರೆ. ಇನ್ನೂ ಆರೇಳು ದಿನ ಪಾದಯಾತ್ರೆ ಮುಂದುವರೆಯಲಿದ್ದು, ಕ್ಲೈಮ್ಯಾಕ್ಸ್ನಲ್ಲಿ ಏನಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.