ಹೆಲ್ಮೆಟ್ ಹಾಕದ್ದನ್ನು ಪ್ರಶ್ನಿಸಿದಕ್ಕೆ ಪೊಲೀಸರ ಕೈಯನ್ನೇ ಕಚ್ಚಿದ ಯುವಕ..!
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದಿದ್ದರೆ ಪೊಲೀಸರು ತಡೆಯುವುದು, ಬೆನ್ನಟ್ಟುವುದು ಮೊದಲಾದ ಘಟನೆಗಳು ಈಗಲೂ ನಡೆಯುತ್ತಿವೆ. ಆದರೆ, ಹೀಗೆ ತಡೆದು ನಿಲ್ಲಿಸಿದಾಗ ದಂಡ ಕಟ್ಟಿಸಿಕೊಳ್ಳುವುದು ಮಾತ್ರವಲ್ಲ, ಇರೋ ಬರೋ ದಾಖಲೆಗಳನ್ನೆಲ್ಲ ಕೇಳುತ್ತಾರೆ. ಹೀಗಾಗಿ ಕೆಲವರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಬೆಂಗಳೂರಿನಲ್ಲಿ ಹೀಗೆ ಸ್ಕೂಟರ್ ಸವಾರರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಆತ ಪೊಲೀಸರ ಕೈಗೇ ಕಚ್ಚಿದ್ದಾನೆ
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಹತ್ತನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ ಇದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರ ಕೈ ಕಚ್ಚಿದ್ದಾನೆ ಒಬ್ಬ ಬೈಕ್ ಸವಾರ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ
ಸ್ಕೂಟರ್‌ನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಯುವಕನನ್ನು ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ತಡೆ ಹಿಡಿದರು. ತಡೆ ಹಿಡಿದು ಸ್ಕೂಟರ್ ಕೀ ಕಿತ್ತುಕೊಂಡರು. ಇದರಿಂದ ಯುವಕ ಸಿಟ್ಟಿಗೆದ್ದಿದ್ದಾನೆ. ಆಸ್ಪತ್ರೆಗೆ ಹೋಗುತ್ತಿದ್ದೇನೆ, ಅರ್ಜಂಟ್ ಇದೆ ಎಂದು ಹೇಳಿದ್ದಾನೆ. ಕೀ ಕೊಡಿ ಎಂದಿದ್ದಾನೆ.
ಪೊಲೀಸನನ್ನೇ ತಳ್ಳಿದ ಆತನನ್ನು ಪೊಲೀಸರು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಆಗ ಆತ ಕೈ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸಪ್ಪನ ಕೈಯನ್ನೇ ಕಚ್ಚಿದ್ದಾನೆ. ಬಳಿಕ ಬಂದು ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಈ ಎಲ್ಲ ವಿದ್ಯಮಾನಗಳನ್ನು ಮೊಬೈಲ್‌ನಲ್ಲಿ ಯಾರೋ ಒಬ್ಬರು ಸೆರೆ ಹಿಡಿದಿದ್ದಾರೆ.
ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ ಎಂದಾಗ ವೈರಲ್ ಆಗಲಿ ಬಿಡಿ, ನಾನು ಆಸ್ಪತ್ರೆಗೆ ಅರ್ಜಂಟಾಗಿ ಹೋಗಬೇಕಿತ್ತು. ಹೋಗಲು ಬಿಡದೆ ಪೊಲೀಸರು ತಡೆ ಹಿಡಿದಿದ್ದಾರೆ, ಅದಕ್ಕೆ ಕಚ್ಚಿದ್ದೇನೆ ಎಂದು ಹೇಳಿದ್ದಾನೆ. ಸಂಚಾರಿ ಪೊಲೀಸರು ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸರಿಂದ ಆರೋಪಿ ವಿರುದ್ಧ ದೂರು ದಾಖಲಾಗಿದೆ.