ಕತಾರ್‌ನಲ್ಲಿ ಮರಣದಂಡನೆಗೊಳಗಾಗಿದ್ದ 8 ನೌಕಾಯೋಧರ ಬಿಡುಗಡೆ
ಕತಾರ್‌ನಲ್ಲಿ (Qatar) ಬೇಹುಗಾರಿಕೆ (Espionage) ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಎಂಟು ಭಾರತೀಯ ನೌಕಾಪಡೆ ಯೋಧರನ್ನು (Indian Navy Veterans) ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಇಂದು ಮುಂಜಾನೆ ತಿಳಿಸಿದೆ. ಅವರಲ್ಲಿ ಏಳು ಮಂದಿ ಈ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದು ಭಾರತದ ರಾಜತಾಂತ್ರಿಕ (Indian diplomacy) ಜಾಣ್ಮೆ, ಕತಾರ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಂದಿರುವ ಸೌಹಾರ್ದ ಸಂಬಂಧಕ್ಕೆ ದೊರೆತ ಜಯವಾಗಿದೆ.
“ಕತಾರ್‌ನಲ್ಲಿ ಬಂಧಿತರಾಗಿದ್ದ, ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು.
ಇವರೆಲ್ಲ ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್‌ನಲ್ಲಿ ಉದ್ಯೋಗಿಗಳಾಗಿದ್ದರು. ಕತಾರ್‌ನಲ್ಲಿ ಕತಾರಿ ಎಮಿರಿ ನೇವಲ್ ಫೋರ್ಸ್‌ಗೆ ಇಟಾಲಿಯನ್ U212 ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳನ್ನು ಅಳವಡಿಸುವ ಕಾರ್ಯದಲ್ಲಿ ಇವರು ತೊಡಗಿದ್ದರು. ಕತಾರ್ ನ್ಯಾಯಾಲಯ ಅಕ್ಟೋಬರ್ 26, 2023ರಂದು ಇವರಿಗೆ ಮರಣದಂಡನೆ ವಿಧಿಸಿತ್ತು.
ಭಾರತ ಈ ತೀರ್ಪಿನಿಂದ “ಆಳವಾಗಿ ಆಘಾತಗೊಂಡಿದ್ದೇವೆ. ಬಂಧಿತರನ್ನು ಬಿಡಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ” ಎಂದು ಹೇಳಿತ್ತು. ಭಾರತದ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಡಿಸೆಂಬರ್‌ನಲ್ಲಿ ಮರಣದಂಡನೆಯನ್ನು ತಗ್ಗಿಸಲಾಯಿತು. ಇದೀಗ ದೇಶಕ್ಕೆ ಮರಳಿದ ನೌಕಾಪಡೆಯ ಯೋಧರು ತಮ್ಮ ಬಿಡುಗಡೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
“ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಾವು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಇದು ಅವರ ವೈಯಕ್ತಿಕ ಹಸ್ತಕ್ಷೇಪದಿಂದ ಮಾತ್ರ ಸಾಧ್ಯವಾಯಿತು” ಎಂದು ಇವರಲ್ಲಿ ಒಬ್ಬರು ಹೇಳಿದ್ದಾರೆ.
“ನಾವು ಭಾರತಕ್ಕೆ ಹಿಂತಿರುಗಲು ಸುಮಾರು 18 ತಿಂಗಳುಗಳ ಕಾಲದಿಂದ ಕಾಯುತ್ತಿದ್ದೆವು. ನಾವು ಪ್ರಧಾನಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಹಾರ್ದಿಕ ಸಂಬಂಧವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನಾವು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ” ಎಂದು ಇನ್ನೊಬ್ಬರು ಹೇಳಿದ್ದಾರೆ.