ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಗುಡ್ಡ ಕುಸಿತದಿಂದ ಕಂಗಾಲಾಗಿರುವ ಕೇರಳದ ನೆರವಿಗೆ ರಾಜ್ಯ ಸರಕಾರ ಮುಂದಾಗಿದ್ದು, ನಿರಾಶ್ರಿರಾದ ವಯನಾಡಿನ 100 ಕುಟುಂಬಗಳಿಗೆ ಮನೆ ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ವಯನಾಡ್‌ನಲ್ಲಿ 100 ಮನೆಗಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ
ಈ ಸಂಬಂಧ “ಎಕ್ಸ್’ ವೇದಿಕೆಯಲ್ಲಿ ವಿಚಾರ ಹಂಚಿಕೊಂಡಿರುವ ಅವರು ನೆರೆಯ ಕೇರಳ ರಾಜ್ಯ ಸಂಕಷ್ಟದಲ್ಲಿದೆ. ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ಜನರ ಬದುಕು ಬೀದಿಪಾಲಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ಜತೆ ನಿಂತು ಅವರಿಗೆ ಮರಳಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡ 100 ಕುಟುಂಬಗಳಿಗೆ ಮನೆ ಕಟ್ಟಿಕೊಡಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದೆ. ಈ ಸಂಬಂಧ ಶನಿವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಮಾತನಾಡಿ ನೆರವಿನ ಭರವಸೆ ನೀಡಿದ್ದೇನೆ ಎಂದು ಪ್ರಕಟಿಸಿದ್ದಾರೆ.
ಸಿದ್ದರಾಮಯ್ಯ ಅವರ ಪ್ರಕಟನೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಿಟ್ವೀಟ್ ಮಾಡಿ ಶ್ಲಾಘಿಸಿದ್ದು, “ಈ ಸಂಕಷ್ಟದ ಸಂದರ್ಭದಲ್ಲಿ ಕೇರಳದ ವಯನಾಡ್‌ನಲ್ಲಿ ನಡೆಯುತ್ತಿರುವ ಪುನರ್ವಸತಿ ಕಾರ್ಯಕ್ಕೆ ಕರ್ನಾಟಕದ ಜನತೆ ಹಾಗೂ ಸರಕಾರ ಮುಂದಾಗಿರುವುದನ್ನು ತುಂಬು ಹೃದಯದಿಂದ ಶ್ಲಾ ಸುತ್ತೇನೆ. ರಾಜ್ಯ ಸರಕಾರಕ್ಕೆ ಧನ್ಯವಾದ’ ಎಂದು ಹೇಳಿದ್ದಾರೆ.
ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ:
ವಯನಾಡು: ಭೀಕರ ಭೂಕುಸಿತಕ್ಕೆ (Wayanad Landslides) ವಯನಾಡು ನಲುಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಒಟ್ಟು ಮೃತರ ಸಂಖ್ಯೆ 350ರ ಗಡಿ ದಾಟಿದೆ. ಸೇನಾ ಕಾರ್ಯಾಚರಣೆ 6ನೇ ದಿನವಾದ ಭಾನುವಾರಕ್ಕೆ ಕಾಲಿಟ್ಟಿದ್ದು, ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.
ದುರಂತ ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ವೇಳೆ ಕೇರಳದ ಸೂಚಿಪ್ಪಾರ ಫಾಲ್ಸ್‌ನಲ್ಲಿ (Soochipara Falls) 11 ಮೃತದೇಹಗಳು ಪತ್ತೆಯಾಗಿವೆ. ಮುಂಡಕ್ಕೈ ಹಾಗೂ ಚೂರುಲ್ಮಲದಿಂದ 5 ಕಿಮೀ ದೂರದಲ್ಲಿ ಫಾಲ್ಸ್ ಇದ್ದು, ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಸಿಲಿಂಡರ್, ಕುಕ್ಕರ್ ಸೇರಿ ಅನೇಕ ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿಕೊಂಡು ಬಂದಿವೆ. ಅಷ್ಟರ ಮಟ್ಟಿಗೆ ಅಂದು ರಾತ್ರಿ ನೀರು ಹರಿದಿದೆ. ಈ ಹಿನ್ನಲೆಯಲ್ಲಿ ಫಾಲ್ಸ್ ಅಕ್ಕಪಕ್ಕದಲ್ಲಿಯೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
30 ಶವ ಪತ್ತೆ ಹಚ್ಚಿರುವ `ಡಿಕ್ಸಿʼ
ಇನ್ನು ದುರಂತ ಸ್ಥಳ ಚೂರಲ್‌ಮಲ ಭಾಗದಲ್ಲಿ ಉತ್ತರ ಪ್ರದೇಶದ ಮೇರಠ್‌ನಿಂದ ಬಂದಿರುವ ಶ್ವಾನಗಳು ಮೃತದೇಹಗಳ ಹುಡುಕಾಟದಲ್ಲಿ ತೊಡಗಿವೆ. ಈಗಾಗಲೇ 30 ಶವಗಳನ್ನು ಪತ್ತೆ ಹಚ್ಚಿದ್ದು, ಡಿಕ್ಸಿ ಹೆಸರಿನ ಶ್ವಾನ ಇದಕ್ಕೆ ಎಕ್ಸ್‌ಪರ್ಟ್ ಆಗಿದೆ. ಈ ಮಧ್ಯೆ ಮುಂಡಕೈ ಗ್ರಾಮಕ್ಕೆ ನಟ ಹಾಗೂ ಸೇನಾಧಿಕಾರಿ ಮೋಹನ್ ಲಾಲ್ ಭೇಟಿ ನೀಡಿ ದುರಂತ ಸ್ಥಳ ವೀಕ್ಷಿಸಿದ್ದಾರೆ.