ಚೆನ್ನೈ: ವೈದ್ಯರಾಗಬೇಕೆಂದು ಕನಸು ಕಾಣುತ್ತಿದ್ದ ಐವರು ವಿದ್ಯಾರ್ಥಿಗಳ ಭವಿಷ್ಯ ಸಮುದ್ರಪಾಲಾಗಿದೆ, ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!
ಮದುವೆ ಸಮಾರಂಭಕ್ಕೆಂದು ಐವರು ವಿದ್ಯಾರ್ಥಿಗಳು ತೆರಳಿದ್ದರು. ಇದೇ ವೇಳೆ, ಲೆಮುರ್ ಬೀಚ್‌ನಲ್ಲಿ ಈಜಾಡುವಾಗ ಐವರೂ ನೀರುಪಾಲಾಗಿದ್ದಾರೆ. ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ.
ಮೃತರನ್ನು ತಂಜಾವೂರಿನ ಚಾರುಕವಿ, ನೇಯ್‌ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂಧ್ರಪ್ರದೇಶದ ವೆಂಕಟೇಶ್ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದಾಗ ಐವರು ನೀರುಪಾಲಾಗಿದ್ದಾರೆ.
ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಲೆಮುರ್ ಬೀಚ್ ಖಾಸಗಿ ಬೀಚ್ ಆಗಿದ್ದು, ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ (ಮೇ 5) ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳಾಗಿ ಚದುರಿ ಹೋಗಿದ್ದಾರೆ.
ಗೆಳೆಯರೆಲ್ಲಾ ಸೇರಿ ಕನ್ಯಾಕುಮಾರಿಯನ್ನು ಸುತ್ತಲು ಮುಂದಾಗಿದ್ದಾರೆ. ಇವರಲ್ಲಿ ಎಂಟು ವಿದ್ಯಾರ್ಥಿಗಳು ಲೆಮುರ್ ಬೀಚ್ ಪ್ರವೇಶಿಸಿದ್ದಾರೆ. ಸಮುದ್ರದಲ್ಲಿ ಭಾರೀ ಅಲೆಗಳಿರುವ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಹೀಗಿದ್ದರೂ ಅವರು ಹೇಗೆ ಹೋದರು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಕನ್ಯಾಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವದನಂ ಮಾಹಿತಿ ನೀಡಿದ್ದಾರೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೋರ್ಸ್ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವುದಿತ್ತು. ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು.