ಬೆಂಗಳೂರು: ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ ತೆರವು
ಬೆಂಗಳೂರು: ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿದ್ದ ಕ್ರೈಸ್ತ ಪ್ರತಿಮೆ ತೆಗೆದು ಆ ಜಾಗಕ್ಕೆ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡಲಾಗಿದೆ. ಆಡಳಿತ ಮಂಡಳಿ ಬೆಂಗಳೂರಿನ ತ್ಯಾಗರಾಜನಗರದ ದೇವಸ್ಥಾನದ ಗೋಪುರದಲ್ಲಿದ್ದ ಯೇಸು ವಿಗ್ರಹ ತೆರವುಗೊಳಿಸಿದೆ.
1968 ರಿಂದ ಗೋಪುರದಲ್ಲಿ ಯೇಸು ಕ್ರಿಸ್ತನ ವಿಗ್ರಹವಿತ್ತು. ಗಣೇಶನ ದೇವಸ್ಥಾನದ ಗೋಪುರದಲ್ಲಿ ಯೇಸುವಿನ ವಿಗ್ರಹ ಯಾಕೆ ಇರಬೇಕು? ಯೇಸು ವಿಗ್ರಹವನ್ನ ತೆರವುಗೊಳಿಸುವಂತೆ ನಾಲ್ಕು ವರ್ಷದಿಂದ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದ್ದರು. ಈ ಹಿನ್ನಲೆ ಮಾರ್ಚ್ 2 ರಂದು ಯೇಸು ಕ್ರಿಸ್ತನ ವಿಗ್ರಹ ತೆರವುಗೊಳಿಸಿ, ಯೇಸು ಕ್ರಿಸ್ತ ಇದ್ದ ಜಾಗದಲ್ಲಿ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡುವುದಾಗಿ ಗಣೇಶ ಮಂದಿರಂ ದೇವಸ್ಥಾನ ಟ್ರಸ್ಟಿ ಸುಮುಖ್ ರಾಜ್ ಹೇಳಿಕೆ ನೀಡಿದ್ದರು.
1968 ರಲ್ಲಿ ನಮ್ಮ ತಾತ ಈ ಗೋಪುರವನ್ನ ಸ್ಥಾಪಿಸಿದ್ರು. ಸರ್ವಧರ್ಮ ಸಹಿಷ್ಣುತೆ ಸಾರುವ ದೃಷ್ಟಿಯಿಂದ ಈ ಗೋಪುರವನ್ನ ನಿರ್ಮಿಸಿದ್ರು. ಈ ಗೋಪುರದಲ್ಲಿ ಯೇಸು ಕ್ರಿಸ್ತ ಮಾತ್ರ ಅಲ್ಲ. ಸಾಯಿಬಾಬಾ, ಬಸವಣ್ಣ, ವಿವೇಕಾನಂದ ಸೇರಿದಂತೆ ಒಂದಷ್ಟು ವಚನಾಕಾರರ ವಿಗ್ರಹ ಕೂಡ ಹಾಕಲಾಗಿತ್ತು. ಇಷ್ಟು ವರ್ಷಗಳ ಕಾಲ ಯಾರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ಒಂದಷ್ಟು ತಿಂಗಳಿನಿಂದ ಹಿಂದೂ ಪರ ಸಂಘಟನೆಗಳು ಯೇಸು ವಿಗ್ರಹ ಗೋಪುರದಲ್ಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ದೇವಸ್ಥಾನಕ್ಕೆ ಬಂದು ಗಲಾಟೆ ಸಹ ಮಾಡಿದ್ರು. ನಂತ್ರ ರಾತ್ರೋರಾತ್ರಿ ಬಂದು ಯೇಸುವಿನ ವಿಗ್ರಹವನ್ನ ಭಿನ್ನಗೊಳಿಸಿದ್ರು. ಈ ಹಿನ್ನಲೆ ಭಿನ್ನವಾಗಿರುವ ವಿಗ್ರಹ ಗೋಪುರದಲ್ಲಿ ಇರಬಾರದೆಂದು ಯೇಸುವಿನ ವಿಗ್ರಹ ತೆರವುಗೊಳಿಸಿ ಆದ್ಯಂತ ಪ್ರಭು ವಿಗ್ರಹ ಪ್ರತಿಷ್ಠಾಪಿಸಿದ್ದೇವೆ ಎಂದು ಸುಮುಖ್ ರಾಜ್ ತಿಳಿಸಿದ್ದಾರೆ.