Worldcup 2023 : ನೆದರ್ಲ್ಯಾಂಡ್ಸ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಗೆಲುವು; ಸೆಮಿಫೈನಲ್ ಕನಸು ಜೀವಂತ!
ಲಕ್ನೋ (ಉತ್ತರ ಪ್ರದೇಶ): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ನೆದರ್ಲೆಂಡ್ಸ್ (Netherlands) ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿರುವ ಅಫ್ಘಾನಿಸ್ತಾನ (Afghanistan) ಸೆಮಿ ಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ. ಏಳು ಪಂದ್ಯಗಳಲ್ಲಿ 4ನೇ ಗೆಲುವು ಕಂಡ ಅಫ್ಘಾನಿಸ್ತಾನ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಅವರ ಅರ್ಧಶತಕದ ನಡುವೆಯೂ 179 ರನ್‌ಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ತಂಡ 31.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿ ಗೆಲುವು ಕಂಡಿತು.
ನೆದರ್ಲೆಂಡ್ಸ್ ತಂಡದ ಪ್ರಮುಖ ನಾಲ್ಕು ಆಟಗಾರರು ರನೌಟ್ ಆಗಿದ್ದು ತಂಡದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಉಳಿದ ವಿಕೆಟ್‌ಗಳನ್ನು ಅಫ್ಘಾನಿಸ್ತಾದ ಸ್ಪಿನ್ನರ್‌ಗಳು ಪಡೆದುಕೊಂಡರು. ವಿಕೆಟ್ ಕೀಪರ್ ಐಕ್ರಾಮ್ ಅಲಿಖಿಲ್ ವಿಕೆಟ್‌ನ ಹಿಂದೆ ಆಕರ್ಷಕ ನಿರ್ವಹಣೆ ನೀಡಿದರು.
ನಾಲ್ಕು ರನೌಟ್‌ಗಳ ಪೈಕಿ ಮೂರು ರನ್‌ಔಟ್‌ಗಳಲ್ಲಿ ಇವರು ಭಾಗಿಯಾಗಿದ್ದು ಮಾತ್ರವಲ್ಲದೆ, ಎರಡು ಕ್ಯಾಚ್‌ಗಳನ್ನೂ ಪಡೆದುಕೊಂಡರು. ಇದು ಅಫ್ಘಾನಿಸ್ತಾನ ತಂಡಕ್ಕೆ ಸತತ ಮೂರನೇ ಗೆಲುವಾಗಿದ್ದು 8 ಅಂಕ ಸಂಪಾದನೆ ಮಾಡಿ ಐದನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ ನಾಕೌಟ್‌ಗೇರುವ ಸಾಧ್ಯತೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.
ಅಫ್ಘಾನಿಸ್ತಾನ ತಂಡದ ಪ್ರಮುಖ ಆರಂಭಿಕ ಜೋಡಿ ರಹಮತುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪ್ರತಿ ಓವರ್‌ಗೆ ಸರಾಸರಿ 6 ರಂತೆ ರನ್ ತರುತ್ತಿದ್ದರು. ಈ ಹಂತದಲ್ಲಿ ದಾಳಿಗಿಳಿದ ಲೋಗನ್ ವಾನ್ ಬೀಕ್, ಗುರ್ಜಾಬ್‌ರ ವಿಕೆಟ್‌ಅನ್ನು ಉರುಳಿಸಿದರು. ಅಂಪೈರ್ ಆರಂಭದಲ್ಲಿ ಇದನ್ನು ವೈಡ್ ಎಂದು ಹೇಳಿದರಾದರೂ, ನೆದರ್ಲೆಂಡ್ಸ್ ತಂಡ ಡಿಆರ್‌ಎಸ್ ಮೂಲಕ ಈ ವಿಕೆಟ್ ಪಡೆದುಕೊಂಡಿತು. ಈ ಹಂತದಲ್ಲಿ ಜದ್ರಾನ್‌ಗೆ ಜೊತೆಯಾದ ರಹಮತ್ ಶಾ ಅಫ್ಘಾನಿಸ್ತಾನಕ್ಕೆ ಗೆಲುವು ನೀಡುವ ನಿಟ್ಟಿನಲ್ಲಿ ವೇಗವಾಗಿ ಮುನ್ನಡೆದರು.
11ನೇ ಓವರ್‌ನಲ್ಲಿ ವಾನ್ ಡೆರ್ ಮರ್ವೆ ದಾಳಿಗೆ ಜದ್ರಾನ್ ಔಟಾದರೂ, ಅಫ್ಘಾನಿಸ್ತಾನ ಮಾತ್ರ ಗೆಲುವು ದಿಕ್ಕಿನಿಂದ ವಿಚಲಿತವಾಗಲಿಲ್ಲ. 20 ಓವರ್ ಮುಕ್ತಾಯದ ವೇಳೆಗೆ 109 ರನ್ ಬಾರಿಸಿದ್ದ ಅಫ್ಘಾನಿಸ್ತಾನಕ್ಕೆ ಆ ಬಳಿಕ ರಹಮತ್ ಹಾಗೂ ಶಾಹಿದಿ ಇನ್ನಿಂಗ್ಸ್‌ಗೆ ವೇಗ ನೀಡಿದರು. 23ನೇ ಓವರ್‌ನಲ್ಲಿ ಸಾಕೀಬ್ ಜುಲ್ಫೀಕರ್‌ಗೆ ರಹಮತ್ ಔಟಾದರೂ, 21 ರಿಂದ 25ನೇ ಓವರ್ ವೇಳೆಗೆ ಪ್ರತಿ ಓವರ್‌ಗೆ 6.5 ರನ್ ನಂತೆ ಅಫ್ಘಾನಿಸ್ತಾನ ತಂಡ ಆಟವಾಡಿತು.
ರಹಮಾನುಲ್ಲಾ ಗುರ್ಬಾಜ್ (10), ಇಬ್ರಾಹಿಂ ಜದ್ರಾನ್ (20), ರಹಮತ್ ಶಾ (52), ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೆ 56 ರನ್ ಹಾಗೂ ಅಜ್ಮತುಲ್ಲಾ ಒಮರ್ಜಾಯ್ 31 ರನ್ ಗಳಿಸಿ ಔಟಾಗದೆ ಉಳಿದರು. ನೆದರ್ಲೆಂಡ್ಸ್ ಪರ ವ್ಯಾನ್ ಬೀಕ್, ವ್ಯಾನ್ ಡೆರ್ ಮೆರ್ವೆ ಹಾಗೂ ಸಾಕಿಬ್ ಜುಲ್ಫಿಕರ್ ತಲಾ 1 ವಿಕೆಟ್ ಪಡೆದರು.
ಆಫ್ಘಾನ್ ಎದುರು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸವಾಲು
ಅಫ್ಘಾನಿಸ್ತಾನ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 7 ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ. ನವೆಂಬರ್ 10 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.