ವಿಶ್ವಕಪ್ 2023: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ ಮಂಗಳೂರಿನ ಕಿನ್ನಿಗೋಳಿ ಯುವತಿ!

ಮಂಗಳೂರು: ಆತಿಥೇಯ ಭಾರತವನ್ನು ಮಣಿಸಿ 6ನೇ ಬಾರಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡ ಆಸ್ಟ್ರೇಲಿಯ ತಂಡದ ಯಶಸ್ಸಿನಲ್ಲಿ ಕರಾವಳಿ ಮೂಲದ ಯುವತಿಯೊಬ್ಬರು ಮಹತ್ವದ ಪಾತ್ರ ವಹಿಸಿರುವ ಸುದ್ದಿ ರೋಮಾಂಚನ ಮೂಡಿಸಿದೆ.
ಮಂಗಳೂರಿನ ಕಿನ್ನಿಗೋಳಿ ಸಮೀ ಪದ ಐವಿ ಮತ್ತು ವ್ಯಾಲೆಂಟೈನ್ ರೊಸಾ ರಿಯೊ ದಂಪತಿ ಪುತ್ರಿ ಊರ್ಮಿಳಾ ರೊಸಾರಿಯೊ ಅವರು ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯ ದಿಂದಲೇ ಕ್ರೀಡಾಕ್ಷೇತ್ರದತ್ತ ಆಸಕ್ತಿ ಹೊಂದಿದ್ದ ಊರ್ಮಿಳಾ ಅವರು ಈ ಹಿಂದೆ ಕತಾರ್ ಟೆನಿಸ್ ಫೆಡರೇಷನ್‌ನಲ್ಲಿ 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು.
ಬಳಿಕ ಆಸ್ಟ್ರೇಲಿಯದ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಬಳಿಕ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಆಯ್ಕೆಗೊಂಡರು. ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಆಸ್ಟ್ರೇಲಿಯ ಪುರುಷ ಕ್ರಿಕೆಟ್ ತಂಡದ ಹೊಣೆ ಹೊತ್ತಿದ್ದಾರೆ.
ಹೀಗೆ ಆಸ್ಟ್ರೇಲಿಯ ತಂಡ ವಿಶ್ವಕಪ್ ಗೆಲ್ಲುವಲ್ಲಿ ಕರಾವಳಿಯ ಊರ್ಮಿಳಾ ರೊಸಾರಿಯೊ ಅವರ ಪಾಲೂ ಇದೆ ಎನ್ನುವುದು ಖುಷಿಯ ಸಂಗತಿ.
Billiards: ಪಂಕಜ್ ಆಡ್ವಾಣಿಗೆ 26ನೇ ವಿಶ್ವ ಬಿಲಿಯರ್ಡ್ಸ್ ಕಿರೀಟ
ದೋಹಾ: ಪಂಕಜ್ ಆಡ್ವಾಣಿ 26ನೇ ಬಾರಿಗೆ ಐಬಿಎಸ್‌ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿ ಯನ್‌ಶಿಪ್ ಪ್ರಶಸ್ತಿಯನ್ನು ತಮ್ಮ ದಾಗಿಸಿಕೊಂಡಿದ್ದಾರೆ. ಮಂಗಳವಾರದ ಫೈನಲ್‌ನಲ್ಲಿ ಅವರು ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ 1000-416 ಅಂಕಗಳ ಜಯ ಸಾಧಿಸಿದರು.
ಮೊದಲ ಗಂಟೆಯ ಸ್ಪರ್ಧೆಯಲ್ಲಿ ಪಂಕಜ್ ಆಡ್ವಾಣಿ 26-180 ಅಂಕಗಳ ಹಿನ್ನಡೆಯಲ್ಲಿದ್ದರು. ಬಳಿಕ ಹಿಡಿತ ಸಾಧಿಸತೊಡಗಿದರು. ಕಳೆದ ವರ್ಷದ ಕೌಲಾಲಂಪುರ ಫೈನಲ್‌ನ “ರೀ ಮ್ಯಾಚ್’ ಇದಾಗಿತ್ತು. ಸೌರವ್ ಕೊಠಾರಿ 2018ರಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದರು.
ಸೆಮಿಫೈನಲ್‌ನಲ್ಲಿ ಆಡ್ವಾಣಿ ಮತ್ತು ಕೊಠಾರಿ ಭಾರತದ ಎದುರಾಳಿಗಳನ್ನೇ ಮಣಿಸಿದ್ದು ವಿಶೇಷ. ಕ್ರಮವಾಗಿ ರೂಪೇಶ್ ಶಾ ಮತ್ತು ಧ್ರುವ ಸಿತ್ವಾಲಾ ಅವರಿಗೆ ಸೋಲುಣಿಸಿದ್ದರು.
2003ರಿಂದ ಪಂಕಜ್ ಆಡ್ವಾಣಿ ಅವರ ವಿಶ್ವ ಪ್ರಶಸ್ತಿ ಗೆಲುವಿನ ಅಭಿಯಾನ ಆರಂಭವಾಗಿತ್ತು.