ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್
ಮಂಗಳೂರು: ಶಿವಮೊಗ್ಗ ರಾಗಿಗುಡ್ಡದಂತೆಯೇ ಮಂಗಳೂರಿನ ಉಳ್ಳಾಲದಲ್ಲಿಯೂ ಈದ್ ಮಿಲಾದ್ ಮೆರವಣಿಗೆಯ (Eid Milad Procession) ನೆಪದಲ್ಲಿ ಯುವಕರು ಪುಂಡಾಟ ಮೆರೆದಿದ್ದು, ಇದೀಗ ಯುವಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ನಡೆಸಿದ ನೂರಾರು ಯುವಕರ ತಂಡ ಉಳ್ಳಾಲದ ಅಬ್ಬಕ್ಕ ಸರ್ಕಲ್ ಬಳಿ ರಸ್ತೆ ಬಂದ್ ಮಾಡಿ ಅಬ್ಬಕ್ಕ ವೃತ್ತವನ್ನೇರಿ ಹಸಿರು ಬಾವುಟ ಪ್ರದರ್ಶಿಸಿ ಚೀರಾಡುತ್ತಾ, ಸೈಲೆನ್ಸರ್ ಶಬ್ಧ ಮಾಡಿ, ಬೈಕ್ ಹಾರ್ನ್ ಹಾಕಿಕೊಂಡು ಪುಂಡಾಟ ಮೆರೆದಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಮೊಗ್ಗ (Shivamogga) ಘಟನೆಯ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಪುಂಡಾಟ ಮೆರೆದ ಯುವಕರಿಗೆ ನೋಟಿಸ್ ನೀಡಿದ್ದಾರೆ.
ಉಳ್ಳಾಲ ಪೊಲೀಸರು (Ullala Police Staion) ವೀಡಿಯೋ ಆಧರಿಸಿ ಯುವಕರ ಪತ್ತೆ ಮಾಡಿದ್ದಾರೆ. ಉಳ್ಳಾಲ, ಮಂಜನಾಡಿ, ಮದಕ, ಕೋಣಾಜೆ, ದೇರಳಕಟ್ಟೆ, ಬಂಟ್ವಾಳ ಹಾಗೂ ಬೆಳ್ತಂಗಡಿ ಭಾಗದ ಯುವಕರು ಎಂದು ತಿಳಿದು ಬಂದಿದೆ. ಈ ಎಲ್ಲಾ ಯುವಕರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಬೀದರ್ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿ ಮೋದಿ
ಬೀದರ್: ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ (Telangana Assembly Election) ಹಿನ್ನೆಲೆ ಇಂದು ಬೀದರ್ ಏರ್ ಬೇಸ್‌ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮಿಸಿದರು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್‌ಗೆ ಆಗಮಿಸಿದ ಮೋದಿ ಅವರನ್ನು ಹೂಗುಚ್ಛ ನೀಡಿ ಸ್ಥಳೀಯ ಬಿಜೆಪಿ ಮುಖಂಡರು (BJP Leaders) ಸ್ವಾಗತಿಸಿದರು.
ಕೇಂದ್ರ ಸಚಿವ ಭಗವಂತ್ ಖೂಬಾ, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ಪ್ರಭು ಚವ್ಹಾಣ್ ಜೊತೆ ಇಬ್ಬರು ಬಿಜೆಪಿ ಶಾಸಕರು ಮೋದಿ ಅವರನ್ನು ಸ್ವಾಗತಿಸಿದರು.
ಬೀದರ್ ಏರ್‌ಬೇಸ್‌ನಿಂದ ಹೆಲಿಕಾಪ್ಟರ್ ಮೂಲಕ ತೆಲಂಗಾಣದ ನಿಜಾಮಾಬಾದ್‌ಗೆ ಮೋದಿ ತೆರಳಿ ನಂತರ ಬಿಜೆಪಿಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಸಂಜೆ ಬೀದರ್ ಏರ್‌ಬೇಸ್‌ಗೆ ಆಗಮಿಸಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ಮೋದಿ ಆಗಮನ ಹಿನ್ನೆಲೆ ಜಿಲ್ಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದು, 4 ಎಸ್‌ಪಿಗಳು, 7 ಡಿಎಸ್‌ಪಿ, 9 ಸಿಪಿಐ, 21 ಪಿಎಸ್‌ಐ ಹಾಗೂ 500ಕ್ಕೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.