ಎರಡು ಎಕರೆ ಜಮೀನಿಗಾಗಿ ಊಟದಲ್ಲಿ ವಿಷ ಬೆರಿಸಿದ ಪತ್ನಿ
ಬೆಳಗಾವಿ: ಪತಿಯ ಎರಡು ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬಳು ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ ಪ್ರಕರಣವನ್ನು ಸವದತ್ತಿಯ ಗೋರಾಬಾಳದಲ್ಲಿ ನಡೆದಿದೆ.
ಸಾವಕ್ಕ (32) ಎಂಬಾಕೆ ಪತಿಗೆ ಆ.11ರ ಬೆಳಗ್ಗೆ ಉಪ್ಪಿಟ್ಟು ಮಾಡಿಕೊಟ್ಟಿದ್ದಳು. ಉಪ್ಪಿಟ್ಟು ತಿಂದ ಬಳಿಕ ನಿಂಗಪ್ಪ ಹಮಾನಿ (35) ತೀವ್ರ ಹೊಟ್ಟೆ ನೋವಿನಿಂದ ಬಳಿದ್ದಾನೆ. ಬಳಿಕ ಆತನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳಿಯ ( Hubballi) ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವಿಷ ಆಹಾರ ಸೇವಿಸಿರುವ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ.
ನಿಂಗಪ್ಪನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆತನಿಗೆ ನೀಡಿದ್ದ ಉಪ್ಪಿಟ್ಟನ್ನು ತಿಂದ ಒಂದು ನಾಯಿ ಮತ್ತು ಒಂದು ಬೆಕ್ಕು ಸತ್ತುಹೋಗಿವೆ ಎಂದು ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ನಿಂಗಪ್ಪ ಅವರ ತಂದೆ ಫಕೀರಪ್ಪ ನೀಡಿದ ದೂರಿನ ಅನ್ವಯ ಸಾವಕ್ಕ ಹಾಗೂ ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ (30) ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಲೈನ್ಮೆನ್ ಮೇಲೆ ಹಲ್ಲೆ ನಡೆಸಿದ ಪುಂಡರು!
ಹಾಸನ: ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ಚೆಸ್ಕಾಂ ನೌಕರರ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದ (Holenarasipura) ಕಡವಿನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರದೀಪ್ ಹಾಗೂ ಕೃಷ್ಣಮೂರ್ತಿ ಹಲ್ಲೆಗೊಳಗಾದ ಚೆಸ್ಕಾಂ ಸಿಬ್ಬಂದಿ. ಶುಕ್ರವಾರ ಸಂಜೆ ಇಬ್ಬರೂ ನೌಕರರು ಕಡವಿನಹೊಸಹಳ್ಳಿ ಗ್ರಾಮಕ್ಕೆ ವಿದ್ಯುತ್ ಲೈನ್ ದುರಸ್ತಿಗೆ ಬಂದು ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವಕರು ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಎಂದು ಲೈನ್ಮೆನ್ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ತೆಗೆದಿದ್ದಾರೆ. ಬಳಿಕ ಇದು ವಿಕೋಪಕ್ಕೆ ತಿರುಗಿದ್ದು, ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಗ್ರಾಮದ ಪುನೀತ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ.
ಗಾಯಾಳು ಲೈನ್ಮೆನ್ಗಳನ್ನು ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ನಗರ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.