ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ; ಸುಳ್ಳು ವದಂತಿ ಹಬ್ಬಿಸದಂತೆ ಪುತ್ರ ಉಮೇಶ್ ಮನವಿ!
ಬೆಂಗಳೂರು: ಕೆಲ ಸಾಮಾಜಿಕ ಜಾಲತಾಣದಲ್ಲಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಇದು ಸುಳ್ಳು ಸುದ್ದಿಯಾಗಿದ್ದು, ಸುಳ್ಳು ವದಂತಿಯನ್ನು ಹಬ್ಬಿಸದಂತೆ (Saalumarada Thimmakka) ಪುತ್ರ ಉಮೇಶ್ ಮನವಿ ಮಾಡಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸೆಗೆ ತಿಮ್ಮಕ್ಕ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರೊಟ್ಟಿಗೂ ಮಾತಾನಾಡುತ್ತಿದ್ದಾರೆ ಎಂದು ಉಮೇಶ್ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ತಿಮ್ಮಕ್ಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಪುತ್ರ ಉಮೇಶ್ ಇಂದು ಬೆಳಗ್ಗೆ ಎಂದಿನಂತೆ ತಿಮ್ಮಕ್ಕರಿಗೆ ತಿಂಡಿಯನ್ನು ತಿನ್ನಿಸಿದ್ದಾರೆ. ಈ ವಿಡಿಯೊವನ್ನು ಪೋಸ್ಟ್ ಮಾಡಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯರು ಕೂಡ ತಿಮ್ಮಕ್ಕರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಲು ಜಾರಿ ಬಿದ್ದಿದ್ದ ತಿಮ್ಮಕ್ಕ
ಪರಿಸರ ಪ್ರೇಮಿ, ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (Saalumarada Thimmakka) ಕಳೆದ ಆಗಸ್ಟ್ 5ರಂದು ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದರು. ಮಂಜುನಾಥನಗರದ ನಿವಾಸಿಯಾಗಿರುವ ಅವರು ಆಯತಪ್ಪಿ ಬಿದ್ದ ಕಾರಣ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಬೆನ್ನು ಮೂಳೆ ಮುರಿತದೊಂದಿಗೆ ಹಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ತುಮಕೂರಿನ ಗುಬ್ಬಿ ತಾಲೂಕಿ ತಿಮ್ಮಕ್ಕ ಅವರು ಪರಿಸರ ಪ್ರೇಮಿಯಾಗಿದ್ದು, ತಮ್ಮ ಸತ್ಕಾರ್ಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಬಡ ಕುಟುಂಬದ ಮಹಿಳೆಯಾಗಿದ್ದ ತಿಮ್ಮಕ್ಕ ಅವರು ಬಡತನದ ನಡುವೆಯೂ ಸಾಲು ಸಾಲು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದರು. ಆ ಮೂಲಕ ಅವರು ವೃಕ್ಷಮಾತೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು. 112ರ ವಯಸ್ಸಿನ ತಿಮ್ಮಕ್ಕ ಅವರು ಕಳೆದ 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವಂತಹ ಕಾಯಕದಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಸರಿಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಖ್ಯಾತಿ ಗಳಿಸಿದ್ದಾರೆ.
ತಿಮ್ಮಕ್ಕ ಅವರು ಪ್ರೀತಿಯಿಂದ ಪೋಷಿಸಿ ನೆಟ್ಟ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಪರಿಸರದ ಉಳಿವಿಗಾಗಿ ಅವರ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ 2019 ರಲ್ಲಿ ತಿಮ್ಮಕ್ಕನವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಸದ್ಯ ಸಾಲುಮರದ ತಿಮ್ಮಕ್ಕ ಅವರಿಗೆ ವಯೋಸಹಜ ಸಮಸ್ಯೆ ಎದುರಾಗಿದೆ. ಉಸಿರಾಟದ ತೊಂದರೆ, ಮಂಡಿ ನೋವು ಜತೆಗೆ ಬೆನ್ನು ಮೂಳೆಯು ಮುರಿದಿರುವುದರಿಂದ ಆಗಾಗ ಅನಾರೋಗ್ಯ ಕಾಡುತ್ತಿದೆ.