ಅಂಗಡಿಯಲ್ಲಿ ಭೀಕರ ಸ್ಫೋಟ, ಬಾಲಕ ಸೇರಿ 3 ಮಂದಿ ಮೃತ್ಯು
ಜಮ್ಮು: ಶುಕ್ರವಾರ ಸಂಜೆ ಕಾರ್ಗಿಲ್ ಜಿಲ್ಲೆಯ ದ್ರಾಸ್‌ನಲ್ಲಿ ಗುಜುರಿ ಅಂಗಡಿಯೊಂದರಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಬಾಲಕ ಸೇರಿ ಮೂರು ಮಂದಿ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೆಲ್‌ನಿಂದ ಲೋಹವನ್ನು ಹೊರತೆಗೆಯುವಾಗ ಸ್ಫೋಟಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಂಗಡಿಯ ಮಾಲೀಕನ ಮಗ ಮತ್ತು ದಾರಿಹೋಕರು ಸೇರಿದಂತೆ ಇಬ್ಬರು ಸಾವನ್ನಪ್ಪಿದರು ಮತ್ತು ಇತರ 12 ಜನರು ಗಾಯಗೊಂಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಮೃತ ಮೂವರಲ್ಲಿ ಇಬ್ಬರನ್ನು ಖಾಂಡ್ಯಾಲ್‌ನ 30 ರ ಹರೆಯದ ಶಬೀರ್ ಅಹ್ಮದ್ ಮತ್ತು ಜಮ್ಮುವಿನ ನರ್ವಾಲ್‌ನ ಸುಮಾರು 12 ವರ್ಷ ವಯಸ್ಸಿನ ಸ್ಕ್ರ್ಯಾಪ್ ಅಂಗಡಿಯ ಮಾಲೀಕನ ಮಗ ಹನಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದ್ರಾಸ್‌ನ ಮುಖ್ಯ ಮಾರುಕಟ್ಟೆಯಲ್ಲಿ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಆಸ್ಪತ್ರೆಗೆ ತೆರಳುವ ನಾಟಕವಾಡಿ ಸೇನೆಗೆ ಸಿಕ್ಕಿಬಿದ್ದ ಉಗ್ರರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ವಾಹನ ತಪಾಸಣೆ ವೇಳೆ ಆಸ್ಪತ್ರೆಗೆ ತೆರಳುವ ನಾಟಕವಾಡಿದ 7 ಉಗ್ರರನ್ನು ಭದ್ರತಾ ಪಡೆ (Indian Army) ಬಂಧಿಸಿದೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕರ ತಂಡವನ್ನು ಭದ್ರತಾ ಪಡೆಗಳು ಭೇದಿಸಿದೆ. ಆರೋಪಿಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ.8ರಂದು ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಚುರುಂಡಾದಲ್ಲಿ ಸೇನೆ ಗಸ್ತು ತಿರುಗುವ ಸಮಯದಲ್ಲಿ ಶಂಕಿತನೊಬ್ಬನನ್ನು ಗಮನಿಸಿತ್ತು. ಈ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದ. ಬಳಿಕ ಆತನನ್ನು ಸೇನೆ ಬಂಧಿಸಿತ್ತು. ಆತನನ್ನು ಪರಿಶೀಲಿಸಿದಾಗ ಎರಡು ಗ್ರೆನೇಡ್‍ಗಳು ಪತ್ತೆಯಾಗಿತ್ತು. ವಿಚಾರಣೆ ವೇಳೆ ಆತ ಹಲವರ ವಿಚಾರ ಬಾಯ್ಬಿಟ್ಟಿದ್ದ.
ಈ ಮಾಹಿತಿ ಆಧಾರದ ರಸ್ತೆಯಲ್ಲಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿತ್ತು. ಈ ವೇಳೆ ಪೊವಾರಿಯನ್ ಥಾಜಲ್ ಉರಿಯಲ್ಲಿ ವಾಹನ ತಪಾಸಣೆ ವೇಳೆ ಭದ್ರತಾ ಪಡೆಗಳು ವಾಹನ ಒಂದನ್ನು ತಡೆದಿದ್ದರು. ಈ ವೇಳೆ ಆಸ್ಪತ್ರೆಗೆ ತೆರಳುತ್ತಿರುವುದಾಗಿ ಅದರಲ್ಲಿದ್ದ ವ್ಯಕ್ತಿಗಳು ತಿಳಿಸಿದ್ದರು. ಬಳಿಕ ಅನುಮಾನದ ಮೇಲೆ ವಾಹನ ತಪಾಸಣೆ ಮಾಡಿದಾಗ ನಾಲ್ಕು ಹ್ಯಾಂಡ್ ಗ್ರೆನೇಡ್‍ಗಳು, ಎರಡು ಪಿಸ್ತೂಲ್‍ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‍ಗಳು, 10 ಜೀವಂತ ಗುಂಡುಗಳು ಮತ್ತು 50,000 ರೂ. ನಗದು ಪತ್ತೆಯಾಗಿದೆ. ಬಳಿಕ ಆರೋಪಿಗಳನ್ನು ಸೇನೆ ಬಂಧಿಸಿದೆ. ಆರೋಪಿಗಳು ಪಾಕಿಸ್ತಾನದ (Pakistan) ಉಗ್ರರ ಆಜ್ಞೆಯ ಮೇರೆಗೆ ಶಸ್ತ್ರಾಸ್ತ್ರಗಳ ಸಾಗಾಟದಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.