ಸಾಲದ ಕಂತು ಬಾಕಿ ಇದೆ ಎಂದು ಸಮಯಾವಕಾಶ ಕೇಳಲು ಫೈನಾನ್ಸ್ ಗೆ ತೆರಳಿದ್ದ ಮಹಿಳೆಗೆ ವಿಪರೀತ ಕಿರುಕುಳ ; ಮನನೊಂದು ನೇಣಿಗೆ ಶರಣು!
ಚಿಕ್ಕಮಗಳೂರು: ಸಾಲ ಮರುವಸೂಲಿ ಎನ್ನುವುದು ಈಗ ಪಕ್ಕಾ ರೌಡಿಸಂ ಚಟುವಟಿಕೆಯಾಗಿದೆ. ಸಾಲದ ಕಂತು ಒಂದು ಮಿಸ್ ಅದರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ (Harassment Case) ನೀಡುವ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿವೆ. ಆದರೆ, ಅವೆಲ್ಲವೂ ಮುಚ್ಚಿ ಹೋಗುತ್ತಿವೆ. ಆದರೆ, ಇದೀಗ ಒಬ್ಬ ಮಹಿಳೆ ಈ ಕೃತ್ಯಗಳಿಂದ ನೊಂದು ಪ್ರಾಣವನ್ನೇ ಕಳೆದುಕೊಂಡಿರುವುದರಿಂದ (woman ends life) ಈ ಫೈನಾನ್ಸ್‌ಗಳ (Finance Loan recovery) ಆಟಾಟೋಪ ಮತ್ತೊಮ್ಮೆ ಬಟಾಬಯಲಾಗಿದೆ.
ಇದು ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ ನಡೆದ ಭಯಾನಕ ಘಟನೆ. ಇಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ (64) ಅವರೇ ಪ್ರಾಣ ಕಳೆದುಕೊಂಡವರು.
ದೇವೀರಮ್ಮ ಅವರು ಕೃಷಿಕ ಮಹಿಳೆ. ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ ನಲ್ಲಿ 78 ಸಾವಿರ ರೂ. ಸಾಲ ಪಡೆದಿದ್ದರು. ಅವರು ವಾರಕ್ಕೊಮ್ಮೆ ಕಂತು ಕಟ್ಟಬೇಕಾಗಿತ್ತು. ಆರಂಭದ ಕೆಲವು ತಿಂಗಳು ಅವರು ವಾರ ವಾರ ಹಣ ಮರುಪಾವತಿ ಮಾಡಿದ್ದರು. ಆದರೆ, ಕಳೆದ ಒಂದು ತಿಂಗಳಲ್ಲಿ ಅವರು ಪ್ರತಿ ವಾರದ ಕಂತು ಕಟ್ಟಿರಲಿಲ್ಲ.
ಮಳೆ ಕೈಕೊಟ್ಟ ಹಿನ್ನೆಲೆ ಹಣ ಇಲ್ಲದೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಕಂತು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅವರಿಗೆ ಪ್ರತಿ ದಿನ ಎನ್ನುವ ಹಾಗೆ ಫೋನ್ ಮಾಡಿ, ಮನೆಗೆ ಭೇಟಿ ನೀಡಿ ಕಿರುಕುಳ ನೀಡಲಾಗುತ್ತಿತ್ತು. ಕೊನೆಗೆ ಅವರನ್ನು ಫೈನಾನ್ಸ್‌ಗೆ ಬಂದು ಮಾತನಾಡಿ ಎಂದು ಸೂಚಿಸಲಾಗಿತ್ತು.
ಫೈನಾನ್ಸ್‌ಗೆ ಹೋಗಿ ಅಲ್ಲಿ ಸಮಸ್ಯೆ ವಿವರಿಸಿ, ಸ್ವಲ್ಪ ಸಮಯಾವಕಾಶ ಕೇಳುವುದು ಎಂದು ತೀರ್ಮಾನಿಸಿ ದೇವೀರಮ್ಮ ಅಲ್ಲಿಗೆ ಭೇಟಿ ನೀಡಿದ್ದರು. ಆದರೆ, ಅಲ್ಲಿ ಅವರಿಗೆ ವಿಪರೀತ ಕಿರುಕುಳ ನೀಡಲಾಗಿದೆ. ಒಮ್ಮೆ ಫೈನಾನ್ಸ್‌ಗೆ ಪ್ರವೇಶಿಸಿದವರನ್ನು ಹೊರಗೆ ಹೋಗಲು ಬಿಟ್ಟಿಲ್ಲ. ಯಾರಿಗಾದರೂ ಹೇಳಿ, ಏನಾದರೂ ಮಾಡಿ ಹಣ ಕೊಟ್ಟೇ ಹೊರಗೆ ಹೋಗಬೇಕು ಎಂದು ತಿಳಿಸಲಾಗಿತ್ತು. ಪರಿಪರಿಯಾಗಿ ವಿನಂತಿಸಿದರೂ ಅಲ್ಲಿನ ಸಿಬ್ಬಂದಿ ಮನಸು ಕರಗಿರಲಿಲ್ಲ. ಕೊನೆಗೆ ಸಂಜೆಯ ಹೊತ್ತಿಗೆ ಹೇಗೋ ಕಚೇರಿಯಿಂದ ಹೊರಬಿಡಲಾಯಿತು.
ಹೀಗೆ ಅಪಮಾನಿತರಾಗಿ ಮನೆಗೆ ಹೋದ ದೇವೀರಮ್ಮ ಮನನೊಂದು ನೇಣು ಬಿಗಿದುಕೊಂಡು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಪ್ರಾಣ ಹೋಗಲು ಕಾರಣವಾದ ಫೈನಾನ್ಸ್ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.