ತುಲಾಭಾರದ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಸಣ್ಣಗಾಯ; ಅಪಾಯದಿಂದ ಪಾರು
ಉಡುಪಿ: ತುಲಾಭಾರ ನಡೆಯುತ್ತಿದ್ದ ವೇಳೆ ತಕ್ಕಡಿ ಕಳಚಿ ಬಿದ್ದ ಪರಿಣಾಮ ಪೇಜಾವರ ಶ್ರೀಗಳಿಗೆ ಸಣ್ಣ ಗಾಯವಾಗಿರುವ ಘಟನೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಶ್ರೀಗಳು ಅಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ.
ಘಟನೆ ಎರಡು ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿದೆ. ಶ್ರೀಗಳು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಶ್ರೀಗಳ ಷಷ್ಟ್ಯಬ್ಧ ಆಚರಣೆ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಈ ಕುರಿತು ಮತ್ತೊಂದು ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಶ್ರೀಗಳು, ನನಗೆ ಸ್ವಲ್ಪ ಗಾಯವಾದದ್ದು ಹೌದು, ಆದರೆ ಈಗ ಅದು ಮಾಯವಾಗಿದೆ, ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ತುಲಾಭಾರ ನಡೆಯುವ ವೇಳೆ ತಕ್ಕಡಿ ಕುಸಿದು ಬಿದ್ದು ಪೇಜಾವರ ಶ್ರೀಗಳು ಗಾಯಗೊಂಡ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ದೆಹಲಿಯಲ್ಲಿ ಭಕ್ತರು ತುಲಾಭಾರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಈ ವೇಳೆ ಈ ಅವಘಡ ಸಂಭವಿಸಿದ್ದು ಪೇಜಾವರ ಸ್ವಾಮೀಜಿ ಸುರಕ್ಷಿತವಾಗಿದ್ದಾರೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಅದ್ದೂರಿ ಕಾರ್ಯಕ್ರಮಗಳು ಏರ್ಪಾಟಾಗಿವೆ. ಒಟ್ಟು ಐದು ದಿನಗಳ ಕಾರ್ಯಕ್ರಮದಲ್ಲಿ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ, ಶಿಷ್ಯರೆಲ್ಲಾ ಸೇರಿ ಪೇಜಾವರ ಶ್ರೀಗಳಿಗೆ ತುಲಾಭಾರ ಏರ್ಪಡಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತಕ್ಕಡಿ ಕುಸಿದು, ತಕ್ಕಡಿಯ ಮೇಲ್ಭಾಗ ಶ್ರೀಗಳ ತಲೆಯ ಮೇಲೆ ಉರುಳಿದೆ. ಆತಂಕಗೊಂಡ ಭಕ್ತರು ಸುತ್ತುವರೆಯುತ್ತಿದ್ದಂತೆ, ಕೈ ಸನ್ನೆಯ ಮೂಲಕ ಸ್ವಾಮೀಜಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ತಕ್ಕಡಿ ಕುಸಿದು ಬಿದ್ದ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತದೆ. ನಯೋಲಿನ್ ಹಗ್ಗದ ಮೂಲಕ ತಕ್ಕಡಿಯನ್ನು ಕಟ್ಟಿರುವುದರಿಂದ ಶಿಥಿಲಗೊಂಡ ಹಗ್ಗ ತುಂಡಾಗಿ ಬಿದ್ದಿರುವ ಸಾಧ್ಯತೆ ಇದೆ. ಭೂಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ತಕ್ಕಡಿ ಇದ್ದ ಕಾರಣ ಪೇಜಾವರ ಶ್ರೀಗಳಿಗೆ ಕುಸಿದು ಬಿದ್ದು ಯಾವುದೇ ಅಡ್ಡಿಯಾಗಿಲ್ಲ. ಆದರೆ ತಲೆಯ ಭಾಗಕ್ಕೆ ಗಾಯವಾಗಿದೆ. ತುಲಾಭಾರ ಮುಗಿಯುತ್ತಿದ್ದಂತೆ ಸುಧಾರಿಸಿಕೊಂಡ ಶ್ರೀಗಳು, ನಂತರ ಎರಡು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಶ್ರೀಗಳ ಆರೋಗ್ಯ ವಿಚಾರಿಸಿದ ಹೆಬ್ಬಾಳ್ಕರ್
ತುಲಾಭಾರದ ವೇಳೆ ಆದ ಅವಘಡದ ಹಿನ್ನೆಲೆಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಆರೋಗ್ಯದ ಕುರಿತಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ಶ್ರೀಗಳ ಆಪ್ತ ಸಹಾಯಕರಿಗೆ ಕರೆ ಮಾಡಿ ಸ್ವಾಮೀಜಿಗಳ ಆರೋಗ್ಯ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದರು. ಶ್ರೀಗಳಿಗೆ ಸಣ್ಣ ಗಾಯವಾಗಿದ್ದನ್ನು, ಗಾಭರಿಪಡುವಂತದ್ದು ಏನಿಲ್ಲ . ಈಗ ಆರೋಗ್ಯವಾಗಿದ್ದು,ಹೊಸದಿಲ್ಲಿಯಿಂದ ಅಯೋಧ್ಯೆಯತ್ತ ಶ್ರೀಗಳು ಪ್ರಯಾಣಿಸುತ್ತಿದ್ದಾರೆ ಎಂದು ಆಪ್ತಸಹಾಯಕರು ತಿಳಿಸಿದರು ಎಂದು ಸಚಿವರು ತಿಳಿಸಿದ್ದಾರೆ. ಶ್ರೀಗಳಿಗೆ ದೇವರು ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.