ರೋಹಿತ್ ಶರ್ಮರನ್ನು ಭೇಟಿಯಾದ ದಿ ಗ್ರೇಟ್ ಖಲಿ!
ನವದೆಹಲಿ: ವಿಶ್ವಕಪ್ ಟೂರ್ನಿ ಆರಂಭವಾಗಿ ಎರಡು ದಿನಗಳು ಕಳೆದಿವೆ. ಅ.8ರ ಭಾನುವಾರದಂದು ಆತಿಥೇಯ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದೆ. ಹೀಗಾಗಿ ರೋಹಿತ್ ಶರ್ಮ ಪಡೆಗೆ ಸಾಕಷ್ಟು ಶುಭಾಶಯಗಳು ಹರಿದುಬರುತ್ತಿವೆ. ಇದರ ನಡುವೆ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ದಿ ಗ್ರೇಟ್ ಖಲಿ ಅವರು ಅಹಮದಾಬಾದ್ನಲ್ಲಿ ರೋಹಿತ್ರನ್ನು ಭೇಟಿಯಾಗಿ ಶುಭ ಕೋರಿದ್ದಾರೆ.
ತಂಡದ ಆಟಗಾರರು ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿಶ್ವಕಪ್ ಪೂರ್ವ ನಾಯಕರ ಸಭೆಗಾಗಿ ರೋಹಿತ್, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇರುವಾಗ ಖಲಿ ಅವರು ಭೇಟಿಯಾಗಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಅ.5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯ ನಡೆಯಿತು.
ಭೇಟಿ ಮಾಡಿದ್ದಲ್ಲದೆ, ಇದೇ ಸಂದರ್ಭದಲ್ಲಿ ಖಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅವರು ಕ್ರಿಕೆಟ್ನ ಬಹುದೊಡ್ಡ ಅಭಿಮಾನಿ ಎಂಬ ಟ್ಯಾಗ್ ಧರಿಸಿದರು. ನಾನು ಪಾಕಿಸ್ತಾನ ತಂಡವನ್ನು ಮಣಿಸಲು ರೆಡಿಯಾಗಿದ್ದೇನೆ. ಆ ಬಳಿಕ ನಾನಿಲ್ಲಿ ವಿಶ್ವಕಪ್ ಗೆಲ್ಲುತ್ತೇನೆ. ಭಾರತ ಜಿಂದಾಬಾದ್ ಎಂದು ಬ್ಯಾಟ್ ಹಿಡಿದು ಕ್ಯಾಮೆರಾ ಮುಂದೆ ಹೇಳುವ ಮೂಲಕ ಪಾಕ್ ತಂಡಕ್ಕೆ ಸಂದೇಶ ರವಾನಿಸಿ, ಭಾರತ ತಂಡಕ್ಕೆ ಶುಭಕೋರಿದ್ದಾರೆ.
Khali Sir pic.twitter.com/uD5bcfxAXg
— Sitaraman (@Sitaraman112971) October 6, 2023
ಆಸ್ಟ್ರೇಲಿಯಾ ಎದುರ ಭಾನುವಾರ ಆರಂಭವಾಗುವ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಚಿಂತೆಯೊಂದು ಕಾಡುತ್ತಿದೆ. ಒಳ್ಳೆಯ ಬ್ಯಾಟಿಂಗ್ ಲಯದಲ್ಲಿರುವ ಶುಭಮನ್ ಗಿಲ್ಗೆ ಡೆಂಘೆ ಜ್ವರ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಆಸಿಸ್ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನವಾಗಿದೆ. ಹೀಗಾಗಿ ಯಾರು ರೋಹಿತ್ ಜತೆ ಆರಂಭಿಕರಾಗಿ ಕಣಕ್ಕಿಳಿಸೋದು ಎಂಬ ಚಿಂತೆ ಇದೆ. ಒಂದು ವೇಳೆ ಗಿಲ್ ಆಡಲು ಸಾಧ್ಯವಾಗದೇ ಇದ್ದರೆ ಇಶಾನ್ ಕಿಶಾನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಿಲ್ ಆರೋಗ್ಯ ಸ್ಥಿತಿಯ ಬಗ್ಗೆ ಬಿಸಿಸಿಐ ಇನ್ನು ಖಚಿತಪಡಿಸಬೇಕಿದೆ.
ಗಿಲ್ ಅವರನ್ನು ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ನಾವು ಭಾವಿಸುತ್ತೇವೆ. ವೈದ್ಯಕೀಯ ತಂಡದಿಂದ ಹೆಚ್ಚಿನ ಮಾಹಿತಿಗಾಗಿ ನಾವು ಕಾಯಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಗಿಲ್ 2023ರಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್, 1230 ರನ್ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. 72.35 ರನ್ ಸರಾಸರಿಯೊಂದಿಗೆ 105.03 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್ನಲ್ಲೂ ಗಿಲ್ ಒಳ್ಳೆಯ ರನ್ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್ ದಾಖಲಿಸಿದ ಗಿಲ್, ಐಸಿಸಿ ಏಕದಿನ ಬ್ಯಾಟ್ಸ್ಮೆನ್ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್ ವರ್ಷದಲ್ಲಿ ಗಿಲ್ ಅವರಿಗೆ 665 ರನ್ ಮಾತ್ರ ಬಾಕಿ ಇದೆ.
ಡೆಂಘೆಯಿಂದ ಚೇತರಿಸಿಕೊಂಡು ಮತ್ತೊಮ್ಮೆ ಆಟದಲ್ಲಿ ಹೊಂದಿಕೊಳ್ಳಲು 7 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದರೆ, ಅದು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ನಾಳೆ ಪಂದ್ಯ ನಡೆಯಲಿದ್ದು, ಗಿಲ್ ಆಡ್ತಾರಾ ಅಥವಾ ಇಲ್ಲವಾ ಎಂಬುದು ಇಂದು ಸಂಜೆ ಒಳಗೆ ಖಚಿತವಾಗುವ ಸಾಧ್ಯತೆ ಇದೆ.