ರಷ್ಯಾದಿಂದ ಜಿಗಿದ ಮೊದಲ ಚಂದ್ರಯಾನ ನೌಕೆ ಚಂದ್ರನ ಮೇಲ್ಮೈ ಮೇಲೆ ಪತನ! ಚಂದ್ರನ ಅಂಗಳಕ್ಕೆ ಅಪ್ಪಳಿಸಿದ ಲೂನಾ
ಮಾಸ್ಕೋ: ರಷ್ಯಾ ಸರಿಸುಮಾರು 50 ವರ್ಷಗಳ ಬಳಿಕ ನಡೆಸಿದ ಮೊದಲ ಚಂದ್ರಯಾನ ಯೋಜನೆ ವಿಫಲವಾಗಿದೆ. ಲೂನಾ- 25 ನೌಕೆಯು ಲ್ಯಾಂಡಿಂಗ್ ಪೂರ್ವ ಮ್ಯಾನೋವರ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಬಳಿಕ ಚಂದ್ರನ ಮೇಲೆ ಅಪ್ಪಳಿಸಿ ಛಿದ್ರವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಭಾನುವಾರ ತಿಳಿಸಿದೆ.
ಲೂನಾ- 25 ಜತೆಗಿನ ಸಂವಹನವು ಶನಿವಾರ ಮಧ್ಯಾಹ್ನ 2.57ರ ವೇಳೆಗೆ ಕಡಿತಗೊಂಡಿತ್ತು ಎಂದು ರಷ್ಯಾ ಹೇಳಿದೆ. ಲೂನಾ- 25ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಗೆ ಜೋರಾಗಿ ಡಿಕ್ಕಿ ಹೊಡೆದ ಬಳಿಕ ಪುಡಿಯಾಗಿದೆ ಎನ್ನುವುದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ.
ನೌಕೆ ಎಲ್ಲಿ ಇದೆ ಎಂಬುದನ್ನು ಪತ್ತೆ ಮಾಡಲು ಹಾಗೂ ಸಂಪರ್ಕಿಸಲು ಆಗಸ್ಟ್ 19 ಮತ್ತು 20ರಂದು ತೆಗೆದುಕೊಂಡ ಕ್ರಮಗಳು ವಿಫಲವಾಗಿದ್ದವು. ನೌಕೆಯ ಲ್ಯಾಂಡರ್ ಪತನಕ್ಕೆ ಕಾರಣಗಳು ಏನು ಎಂದು ತಿಳಿಯಲು ತನಿಖೆ ಆರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಯಾವ ರೀತಿಯ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂಬ ಯಾವುದೇ ಸುಳಿವನ್ನು ಸಂಸ್ಥೆ ನೀಡಿಲ್ಲ.ಲೂನಾ- 25 ಚಂದ್ರಯಾನ ಮಿಷನ್‌ನೊಂದಿಗೆ ರಷ್ಯಾವು ಸೋವಿಯತ್ ಕಾಲದ ಬಾಹ್ಯಾಕಾಶ ಸಾಧನೆಗಳ ಪರಂಪರೆಯ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಿತ್ತು. ಉಕ್ರೇನ್ ಮೇಲಿನ ಯುದ್ಧದ ಕಾರಣ ಪಾಶ್ಚಿಮಾತ್ಯ ದೇಶಗಳಿಂದ ನಿರ್ಬಂಧಗಳಿಗೆ ಒಳಗಾಗಿರುವ ರಷ್ಯಾ, ಈ ಎಲ್ಲ ಬಿಕ್ಕಟ್ಟುಗಳ ನಡುವೆಯೇ 47 ವರ್ಷಗಳ ಬಳಿಕ ತನ್ನ ಸ್ವತಂತ್ರ ಚಂದ್ರ ಅಧ್ಯಯನ ಯೋಜನೆಗೆ ವಾಪಸಾಗಿತ್ತು.
ಭಾರತಕ್ಕೆ ಸವಾಲು ಹಾಕಲು ಹೊರಟಿದ್ದ ರಷ್ಯಾ
800 ಕೆಜಿ ತೂಕದ ಲೂನಾ- 25 ಅಧ್ಯಯನ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಆಗಸ್ಟ್ 21ರಂದು ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದು ಸಾಧ್ಯವಾಗಿದ್ದರೆ ಚಂದ್ರನ ಅಧ್ಯಯನದಲ್ಲಿ ರಷ್ಯಾ ಚಾರಿತ್ರ್ಯಿಕ ಸಾಧನೆ ಮಾಡಿದಂತಾಗುತ್ತಿತ್ತು. ಇದುವರೆಗೂ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಗಮವಾಗಿ ಇಳಿಸುವುದು ಸಾಧ್ಯವಾಗಿಲ್ಲ. ಭಾರತದ ಇಸ್ರೋ ಜತೆಗೆ ಪೈಪೋಟಿಗೆ ಇಳಿದಿದ್ದ ರಷ್ಯಾ, ತಡವಾಗಿ ಉಡಾವಣೆಯಾದರೂ ಚಂದ್ರಯಾನ- 3ಕ್ಕಿಂತಲೂ ಬೇಗನೆ ದಕ್ಷಿಣ ಧ್ರುವದಲ್ಲಿ ಇಳಿಯುವ ಅವಸರ ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ.
1989ರಿಂದಲೂ ರಷ್ಯಾ ಯಾವುದೇ ಆಕಾಶಕಾಯದ ಮೇಲೆ ತನ್ನ ನೌಕೆ ಇಳಿಸುವ ಪ್ರಯತ್ನ ಮಾಡಿಲ್ಲ. ಮಂಗಳ ಗ್ರಹದ ಚಂದ್ರನ ಅಧ್ಯಯನಕ್ಕಾಗಿ ತೆರಳಿದ್ದ ಸೋವಿಯತ್ ಒಕ್ಕೂಟದ ಫೋಬೋಸ್ 2 ಅಧ್ಯಯನ ನೌಕೆಯು ತನ್ನಲ್ಲಿದ್ದ ಕಂಪ್ಯೂಟರ್ ದೋಷದ ಕಾರಣದಿಂದ ವಿಫಲವಾಗಿತ್ತು.ಆಗಸ್ಟ್ 10ರಂದು ಲೂನಾ 25 ನೌಕೆ ಉಡಾವಣೆಗೊಂಡಿತ್ತು. ಚಂದ್ರಯಾನ- 3ಗಿಂತಲೂ ಬಹಳ ವೇಗವಾಗಿ ಚಲಿಸಿದ ಲೂನಾ, ದಕ್ಷಿಣ ಧ್ರುವದ ಮೇಲೆ ಇಳಿಯುವ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಬಯಕೆ ಹೊಂದಿತ್ತು. ಆದರೆ ರಷ್ಯಾದ ಪ್ರಯತ್ನ ನುಚ್ಚುನೂರಾಗಿದೆ. ಇದೀಗ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವ ಅಪೂರ್ವ ಅವಕಾಶ ಮತ್ತೆ ಭಾರತಕ್ಕೆ ದೊರಕಿದೆ.