ಬಿಜೆಪಿಯ ಭದ್ರಕೋಟೆ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಸೌಮ್ಯ ರೆಡ್ಡಿ ಕಣಕ್ಕೆ; ಕ್ಷೇತ್ರದ ಹಿನ್ನೆಲೆ ಹೇಗಿದೆ.!
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ನಡುವೆ ಹಣಾಹಣಿ ನಡೆಯಲಿದೆ. ಕ್ಷೇತ್ರವು ದಶಕಗಳಿಂದ ಕೇಸರಿ ಪಕ್ಷದ ಭದ್ರಕೋಟೆಯಾಗಿದೆ, ಅಲ್ಲಿ ಪಕ್ಷವು 1991 ರಿಂದ ವಿಜಯಗಳನ್ನು ದಾಖಲಿಸುತ್ತಿದೆ, ಆದರೆ ಕಾಂಗ್ರೆಸ್ ಸ್ವಾತಂತ್ರ್ಯದ ನಂತರ ಕೇವಲ ಎರಡು ಬಾರಿ ಮಾತ್ರ ವಿಜಯಶಾಲಿಯಾಗಿದೆ – 1951 ಮತ್ತು 1989 ರಲ್ಲಿ ಕ್ರಮವಾಗಿ ಟಿ ಮಾದಯ್ಯಗೌಡ ಮತ್ತು ಆರ್ ಗುಂಡೂರಾವ್ ಗೆದ್ದರು.
ತೇಜಸ್ವಿ ಸೂರ್ಯ ಮತ್ತು ಸೌಮ್ಯಾ ರೆಡ್ಡಿ ಯಾರು?
ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ. ಅವರು ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿದ್ದಾರೆ. ತೇಜಸ್ವಿ ಸೂರ್ಯ 2019 ರಲ್ಲಿ ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್ ಅವರನ್ನು ಸೋಲಿಸಿದರು. ಸೂರ್ಯ ಮೊದಲು, ಅನಂತ್ ಕುಮಾರ್ 1996 ರಿಂದ 2019 ರವರೆಗೆ ಆರು ಬಾರಿ ಸಂಸದರಾಗಿದ್ದರು.
ಸೌಮ್ಯಾ ರೆಡ್ಡಿ ಕರ್ನಾಟಕದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಿಕೆ ರಾಮಮೂರ್ತಿ ವಿರುದ್ಧ ಸೋಲನುಭವಿಸುವ ಮೊದಲು ಅವರು 2018 ರಲ್ಲಿ ಜಯನಗರದಿಂದ ಶಾಸಕರಾಗಿದ್ದರು. ಅವರು ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಈ ಕ್ಷೇತ್ರವು ಸಾಂಪ್ರದಾಯಿಕವಾಗಿ ಬಿಜೆಪಿ ಭದ್ರಕೋಟೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ 1991 ರಿಂದ ಪಕ್ಷವು ಸೋತಿಲ್ಲ. 1951 ಮತ್ತು 1989 ರಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದಿತ್ತು. 1991 ರಿಂದ ಬಿಜೆಪಿ ಈ ಸ್ಥಾನವನ್ನು ಗೆಲ್ಲುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಬಿಜೆಪಿಯನ್ನು ತನ್ನ ಭದ್ರಕೋಟೆಯಿಂದ ಕಿತ್ತೊಗೆಯಲು ನೋಡುತ್ತಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?
ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರವೆಂದರೆ ಅದು ಬಿಜೆಪಿ ಭದ್ರಕೋಟೆ. 1991 ರಿಂದ ಸತತವಾಗಿ ಬಿಜೆಪಿ ಗೆದ್ದು ಅಧಿಪತ್ಯ ಸ್ಥಾಪಿಸಿದೆ. 2024 ರ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೇಗಾದರು ಮಾಡಿ ಕ್ಷೇತ್ರವನ್ನು ವಶಕ್ಕೆ ಪಡೆಯಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್‌ಗೆ (Congress) ಈ ಕ್ಷೇತ್ರದಲ್ಲಿ ಅಸ್ತಿತ್ವ ಇಲ್ಲ. ಚುನಾವಣಾ ಇತಿಹಾಸ ಗಮನಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಎರಡೇ ಬಾರಿ. ಆದರೆ ಬಿಜೆಪಿ (BJP) ಭದ್ರ ಬುನಾದಿ ಹಾಕಿಕೊಂಡಿದೆ. ಸತತ ಆರು ಬಾರಿ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ತಮ್ಮ ರಾಜಕೀಯ ಜೀವನದ ಚೊಚ್ಚಲ ಗೆಲುವಿನೊಂದಿಗೆ ಪಾರ್ಲಿಮೆಂಟ್ ಮೆಟ್ಟಿಲೇರಿದ್ದಾರೆ.
ಕ್ಷೇತ್ರ ಪರಿಚಯ
ಒಕ್ಕಲಿಗರ ಪ್ರಾಬಲ್ಯವಿರುವ ಬೆಂಗಳೂರು ದಕ್ಷಿಣ ಕ್ಷೇತ್ರವು ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯಕ್ಕೆ ಸೇರಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ.ಮಾದಯ್ಯಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಮೊದಲ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದರು. ಅದಾದ ಬಳಿಕ ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರವನ್ನು ಕ್ಷೇತ್ರವಾಗಿ ಮಾಡಲು ವಿಲೀನಗೊಳಿಸಲಾಯಿತು. ಹೆಚ್.ಸಿ.ದಾಸಪ್ಪ 1957 ರಿಂದ 1962 ರ ವರೆಗೆ ಈ ಕ್ಷೇತ್ರದಿಂದ ಚುನಾಯಿತರಾದರು. ನೆಹರೂ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ನಂತರ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದರು.
ತುರ್ತು ಪರಿಸ್ಥಿತಿ ಮತ್ತು ದೇಶಾದ್ಯಂತ ಕ್ಷೇತ್ರಗಳ ಮರುವಿಂಗಡಣೆಯ ನಂತರ, ಈ ಲೋಕಸಭಾ ಸ್ಥಾನವು 1977 ರಲ್ಲಿ ಬೆಂಗಳೂರು ದಕ್ಷಿಣವಾಗಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಈ ಕ್ಷೇತ್ರದಲ್ಲಿ 12 ಚುನಾವಣೆಗಳು ನಡೆದಿವೆ. ಬಿಜೆಪಿ 8 ಬಾರಿ, ಜನತಾ ಪಕ್ಷ 3 ಬಾರಿ ಮತ್ತು ಕಾಂಗ್ರೆಸ್ ಕೇವಲ ಒಂದು ಬಾರಿ ಗೆದ್ದಿದೆ. ಬಿಜೆಪಿ ನಾಯಕ ಅನಂತ್ ಕುಮಾರ್ ಈ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿದ್ದಾರೆ.
ವಿಧಾನಸಭಾ ಕ್ಷೇತ್ರಗಳೆಷ್ಟು?
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ. ಒಟ್ಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದಾರೆ.
ಮತದಾರರ ಸಂಖ್ಯೆ ಎಷ್ಟು?
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 23,17,472 ಮತದಾರರು ಇದ್ದಾರೆ. ಅವರ ಪೈಕಿ ಪುರುಷರು 11,95,285 ಹಾಗೂ ಮಹಿಳಾ ಮತದಾರರು 11,21,788 ಇದ್ದಾರೆ. ತೃತೀಯಲಿಂಗಿ ಮತದಾರರು 399 ಇದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಸೋಲನುಭವಿಸಿದರು. 3,31,192 ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.
ತೇಜಸ್ವಿ ಸೂರ್ಯಗೆ ಮತ್ತೆ ಟಿಕೆಟ್
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತ ಗೆಲುವಿನ ಓಟ ಮುಂದುವರಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಹೀಗಾಗಿ ಎರಡನೇ ಬಾರಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಟ್ಟಿದೆ. 2019 ರಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದ ಸೂರ್ಯಗೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಲಾಗಿತ್ತು. ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತಂದು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಕಳೆದ 32 ವರ್ಷಗಳಿಂದ ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿದೆ.
ಕಾಂಗ್ರೆಸ್‌ನಿಂದ ಸೌಮ್ಯಾ ರೆಡ್ಡಿಗೆ ಮಣೆ
ಬೆಂಗಳೂರು ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ತಮ್ಮದೇ ಆದ ಹಿಡಿತವನ್ನ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಪುತ್ರಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದರು. ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆಯೂ ಚರ್ಚೆ ನಡೆಸಿದ್ದರು. ಅದಕ್ಕೆ ಈಗ ಫಲ ಸಿಕ್ಕಿದೆ. ನಿರೀಕ್ಷೆಯಂತೆ ಸೌಮ್ಯಾ ರೆಡ್ಡಿಗೆ (Sowmya Reddy) ಕಾಂಗ್ರೆಸ್ ಟಿಕೆಟ್ ನೀಡಿದೆ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಹಣಾಹಣೆ ಏರ್ಪಡಲಿದೆ.