ಬಿಟ್ ಕಾಯಿನ್ ತನಿಖೆ ನಡೆಸಿದ್ದ ಸಿಸಿಬಿ ಇನ್ಸ್‌ಪೆಕ್ಟರ್‌ಗಳ ಮನೆಗೆ ಎಸ್‌ಐಟಿ ದಾಳಿ
ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ (Bitcoin Scam) ತನಿಖೆ ಜೋರಾಗಿದೆ. ಪ್ರಸಕ್ತ ಈ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ. ಮೊದಲು ಸಿಸಿಬಿ ತನಿಖೆ ನಡೆಸಿತ್ತು. ಹೊಸ ಬೆಳವಣಿಗೆಯಲ್ಲಿ ಈ ಹಗರಣದ ಸಿಸಿಬಿ ತನಿಖೆಯ ವೇಳೆ ಮುಂದಾಳುತ್ವ ವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನೇ (Police Inspectors) ಟಾರ್ಗೆಟ್ ಮಾಡಿ ಎಸ್‌ಐಟಿ ದಾಳಿ ನಡೆಸಿದೆ.
ಪ್ರಮುಖವಾಗಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರ್ ಮನೆ ಮೇಲೆ ದಾಳಿ ನಡೆದಿದೆ. ಅವರೂ ಸೇರಿದಂತೆ ಒಟ್ಟು ಐವರು ಅಧಿಕಾರಿಗಳ ನಿವಾಸ ಸೇರಿ ಏಳು ಕಡೆಗಳಿಗೆ ದಾಳಿ ನಡೆದಿದೆ.
ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರು ವಾಸವಾಗಿರುವ ತುಮಕೂರು ರಸ್ತೆಯ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆದಿದೆ.
ಬೊಮ್ಮನಹಳ್ಳಿ ಸೋಲಾಪುರಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಸೈಬರ್ ಎಕ್ಸ್‌ಪರ್ಟ್ ಸಂತೋಷ್ ಮನೆ ಮೇಲೆ ದಾಳಿ ನಡೆದಿದೆ. ರಾಮಮೂರ್ತಿ ನಗರದಲ್ಲಿ ವಾಸವಿರುವ ಇನ್ಸ್ ಪೆಕ್ಟರ್ ಚಂದ್ರಾಧರ್, ಲಕ್ಷ್ಮೀಕಾಂತ್ ಹೀಗೆ ಐವರು ಅಧಿಕಾರಿಗಳ ಮೇಲೆ ಟಾರ್ಗೆಟ್ ಮಾಡಲಾಗಿದೆ. ಇವರೆಲ್ಲರೂ ಅಂದು ಸಿಸಿಬಿಯಲ್ಲಿ ಬಿಟ್ ಕಾಯಿನ್ ಕೇಸ್ ತನಿಖೆ ನಡೆಸಿದ್ದ ಇನ್ಸ್ ಪೆಕ್ಟರ್‌ಗಳಾಗಿರುವುದು ವಿಶೇಷವಾಗಿದೆ.
ಇನ್ಸ್‌ಪೆಕ್ಟರ್‌ಗಳ ಮನೆಗಳಿಗೆ ದಾಳಿ ನಡೆಸಿರುವ ವಿಶೇಷ ತನಿಖಾ ದಳ ಎಲ್ಲ ಕಡೆ ಪರಿಶೀಲನೆ ನಡೆಸಿದೆ. ಮನೆಯಲ್ಲಿರುವ ಲ್ಯಾಪ್ ಟಾಪ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.
ಇನ್ಸ್‌ಪೆಕ್ಟರ್‌ಗಳಲ್ಲದೆ ಒಬ್ಬ ಖಾಸಗಿ ವ್ಯಕ್ತಿ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ.
ದಾರಿ ತಪ್ಪಿಸಲು ಯತ್ನಿಸಲಾಗಿದೆಯೇ ಎಂದು ತನಿಖೆ
ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದ್ದ ಬಿಟ್ ಕಾಯಿನ್ ಹಗರಣದ ಬಗ್ಗೆ ಇದೀಗ ಹೊಸ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ಈಗ ಈ ಹಿಂದೆ ತನಿಖೆ ನಡೆಸಿದ ಸಿಸಿಬಿ ಪೊಲೀಸರನ್ನೇ ವಿಚಾರಣೆಗೆ ಒಳಪಡಿಸಿರುವುದು ನೋಡಿದರೆ ಈ ಅಧಿಕಾರಿಗಳು ಏನಾದರೂ ದಾಖಲೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆಯೇ ಎಂಬ ಗುಮಾನಿ ಮೇಲೆ ಇದು ನಡೆದಿದೆ ಎಂಬ ಸಂಶಯವಿದೆ.
ಏನಿದು ಬಿಟ್ ಕಾಯಿನ್ ಹಗರಣ?
ನವೆಂಬರ್ 2020 ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಅವರು ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ವಿಷಯ ಹೊರಬಂದಿತ್ತು. ಶ್ರೀಕಿ 2019ರಲ್ಲಿ ಕರ್ನಾಟಕ ಸರಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನಡೆದ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.
2019ರ ಜುಲೈನಲ್ಲಿ 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಬೆಳಕಿಗೆ ಬಂದಿತ್ತು. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅವರಿಂದ ನಗದು ಪಡೆದಿದ್ದ ಎಂದು ಹೇಳಲಾಗಿದೆ.