ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ಗೆ ಶಾಕ್ ; ನೆದರ್ಲೆಂಡ್ಸ್‌ಗೆ 38 ರನ್‌ಗಳ ಭರ್ಜರಿ ಜಯ!
ಧರ್ಮಶಾಲಾ: ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ (Scott Edwards) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ವ್ಯಾನ್ ಬೀಕ್ ಉತ್ತಮ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ 38 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ದ.ಆಫ್ರಿಕಾಗೆ (South Africa) ಈ ಪಂದ್ಯದಲ್ಲಿ ನಿರಾಸೆಯಾಗಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ (Cricket World Cup 2023) ಪಂದ್ಯದಲ್ಲಿ ನೆದರ್ಲೆಂಡ್ಸ್ (Netherlands) ಜಯಭೇರಿ ಬಾರಿಸಿತು. ನೆದರ್ಲೆಂಡ್ಸ್ ನೀಡಿದ್ದ 246 ರನ್‌ಗಳ ಗುರಿ ಬೆನ್ನತ್ತಲಾಗದೇ ದ.ಆಫ್ರಿಕಾ 207 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು
ದ.ಆಫ್ರಿಕಾದ ಆರಂಭಿಕ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ತೆಂಬಾ ಬವುಮಾ ಕೇವಲ 16 ರನ್‌ಗೆ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಕ್ವಿಂಟನ್ ಡಿ ಕಾಕ್ 20 ರನ್‌ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಕ್ರಮವಾಗಿ 4, 1 ರನ್ ಗಳಿಸಿ ನೆದರ್ಲೆಂಡ್ಸ್ ಬೌಲರ್‌ಗಳ ಮಾರಕ ಬೌಲಿಂಗ್‌ಗೆ ತರಗೆಲೆಯಂತೆ ಉದುರಿ ಹೋದರು.
ಈ ವೇಳೆ ದ.ಆಫ್ರಿಕಾ ತಂಡಕ್ಕೆ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ (Devid Miller) ಕೊಂಚ ಚೇತರಿಕೆ ನೀಡಿದರು. ಆದರೆ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ಹೆನ್ರಿಕ್ ಕ್ಲಾಸೆನ್ 28 ರನ್‌ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮಿಲ್ಲರ್ ಉತ್ತಮ ಪ್ರದರ್ಶನದೊಂದಿಗೆ 52 ಬಾಲ್‌ಗೆ 43 ರನ್ ಗಳಿಸಿ (4 ಫೋರ್, 1 ಸಿಕ್ಸರ್) ಅರ್ಧಶತಕ ವಂಚಿತರಾಗಿ ಹೆಚ್ಚು ಹೊತ್ತು ನಿಲ್ಲಲಾಗದೇ ಪೆವಿಲಿಯನ್ ಸೇರಿದರು.
ನಂತರ ಬಂದ ಆಟಗಾರರು ಸಹ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಾರ್ಕೊ ಜಾನ್ಸೆನ್ 9 ರನ್‌ಗೆ ಬೌಲ್ಡ್ ಆದರು. ಉತ್ತಮ ಲಯದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಜೆರಾಲ್ಡ್ ಕೋಟ್ಜಿ ಕೂಡ 22 ರನ್ ಗಳಿಸಲಷ್ಟೇ ಶಕ್ತರಾದರು. ಇನ್ನು ಕಗಿಸೊ ರಬಾಡ ಹೀಗೆ ಬಂದು 9 ರನ್ ಗಳಿಸಿ ಹಾಗೆ ಹೋದರು.
ನೆದರ್ಲೆಂಡ್ಸ್‌ನ ಲೋಗನ್ ವ್ಯಾನ್ ಬೀಕ್ (Logan Van Beek) 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಬಾಸ್ ಡಿ ಲೀಡೆ ತಲಾ 2 ಹಾಗೂ ಕಾಲಿನ್ ಅಕರ್ಮನ್ 1 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು
ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮಳೆಯಿಂದಾಗಿ ಪಂದ್ಯ ವಿಳಂಬವಾಗಿ ಆರಂಭಗೊಂಡಿತು. ಪರಿಣಾಮವಾಗಿ ಓವರ್‌ಗಳ ಸಂಖ್ಯೆಯನ್ನು 43 ಕ್ಕೆ ಇಳಿಸಲಾಗಿತ್ತು.
ಬ್ಯಾಟಿಂಗ್‌ಗೆ ಬಂದ ನೆದರ್ಲೆಂಡ್ಸ್ ಕಳಪೆ ಆರಂಭ ನೀಡಿತು. ಆರಂಭಿಕ ಬ್ಯಾಟರ್ ವಿಕ್ರಮಜಿತ್ ಸಿಂಗ್ 16 ಬಾಲ್‌ಗೆ ಕೇವಲ 2 ರನ್‌ಗಳಿಸಿ ಕಾಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರೆ, ಮಾಕ್ಸ್ ಓ’ಡೌಡ್ 18 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕಾಲಿನ್ ಆಕರ್ಮನ್ 12 ರನ್‌ಗಳಿಸಿ ಕ್ಲೀನ್ ಬೌಲ್ಡ್ ಆದರು. ಬಾಸ್ ಡಿ ಲೀಡೆ ಕೂಡ ಕೇವಲ 2 ರನ್‌ಗೆ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ನಂತರ ಬಂದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಹಾಗೂ ತೇಜ ನಿಡಮನೂರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಇಬ್ಬರೂ ಕ್ರಮವಾಗಿ 19, 20 ಹಾಗೂ ಲೋಗನ್ ವ್ಯಾನ್ ಬೀಕ್ ಕೇವಲ 10 ರನ್‌ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಸ್ಕಾಟ್ ಎಡ್ವರ್ಡ್ಸ್ ಮಿಂಚಿಂಗ್
ಕಳಪೆ ಆರಂಭ ಪಡೆದ ನೆದರ್ಲೆಂಡ್ಸ್ ಕಳೆ ಕ್ರಮಾಂಕದ ಆಟಗಾರರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಟಾರ್ಗೆಟ್ ನೀಡಿತು. 50 ರನ್ ಇರುವಾಗಲೇ ನಾಲ್ಕು ವಿಕೆಟ್ ಹಾಗೂ 116 ರನ್‌ಗೆ ಬರುತ್ತಿದ್ದಂತೆ 6 ವಿಕೆಟ್ ಕಳೆದುಕೊಂಡು ನೆದರ್ಲೆಂಡ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ಆಸರೆಯಾದರು. 69 ಎಸೆತಗಳಿಗೆ ಔಟಾಗದೇ 78 ರನ್ (10 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು.ನೆದರ್ಲೆಂಡ್ಸ್ ಪರ ಏಕಾಂಗಿ ಜವಾಬ್ದಾರಿಯುತ ನಾಯಕನ ಆಟವಾಡಿದ ಸ್ಕಾಟ್ ಎಡ್ವರ್ಡ್ಸ್ ಔಟಾಗದೆ ಅರ್ಧಶತಕದೊಂದಿಗೆ ತಂಡ 200 ರ ಗಡಿ ದಾಟುವಂತೆ ಮಾಡಿ ದಕ್ಷಿಣ ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ ಉಪಯುಕ್ತ 29 ರನ್ ಗಳಿಸಿದರೆ, ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರ್ಯನ್ ದತ್ ಸ್ಫೋಟಕ 23 ರನ್ ಬಾರಿಸಿದರು. ಕೊನೆಗೆ ನೆದರ್ಲೆಂಡ್ಸ್ 43 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 245 ರನ್‌ಗಳಿಸಿತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ 246 ರನ್‌ಗಳ ಗುರಿ ನೀಡಿತು