RCB: ಆರ್ಸಿಬಿಗೆ ಹೀನಾಯ ಸೋಲು; ವಿರಾಟ್ ಕೊಹ್ಲಿ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್..!
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರ ಭರ್ಜರಿ ಶತಕದ ನೆರವಿನಿಂದ ಗೆಲುವು ಸಾಧಿಸಿತು.
ಇಂದು ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ (RCB) ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟ ಮಾಡಿಕೊಂಡರು 183 ರನ್ ಬಾರಿಸಿತು.
ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ವಿರಾಟ್ ಕೊಹ್ಲಿ ಐಪಿಎಲ್ ವೃತ್ತಿ ಜೀವನದಲ್ಲಿ 8ನೇ ಶತಕವಾಗಿದೆ.
ಗೆಲುವಿಗೆ 184 ರನ್ ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡ 19.1 ಓವರ್ಗಳಲ್ಲಿ 4 ವಿಕೆಟ್ ಗೆ 189 ರನ್ ಬಾರಿಸಿ ಸುಲಭವಾಗಿ 6 ವಿಕೆಟ್ ಗಳ ಜಯ ತನ್ನದಾಗಿಸಿಕೊಂಡಿತು. 58 ಎಸೆತಗಳಲ್ಲಿ ಶತಕ ಬಾರಿಸಿದ ಜೋಸ್ ಬಟ್ಲರ್ ಗೆಲುವಿನ ರೂವಾರಿ ಎನಿಸಿಕೊಂಡರು. ಅವರದ್ದು ಕೂಡ ಐಪಿಎಲ್ನಲ್ಲಿ 6ನೇ ಶತಕವಾಗಿದೆ. ಈ ಮೂಲಕ ಕ್ರಿಸ್ಗೇಲ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಗೆಲುವಾಗಿದೆ. ಅಲ್ಲದೆ ನಾಲ್ಕು ಗೆಲುವುಗಳ ಸಮೇತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ರಾಜಸ್ಥಾನ ವಿರುದ್ಧದ ಈ ಪಂದ್ಯದಲ್ಲಿ ಆರ್ಸಿಬಿಯ ಆರಂಭಿಕ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಅಜೇಯ 113 ರನ್ ಸಿಡಿಸಿದರೆ, ಡುಪ್ಲೆಸಿಸ್ 44 ರನ್ ಬಾರಿಸಿದ್ದಾರೆ. ಇನ್ನುಳಿದಂತೆ ಕ್ಯಾಮರೂನ್ ಗ್ರೀನ್ ಅಜೇಯ 5 ರನ್ ಗಳಿಸಿದ್ದಾರೆ. ರಾಜಸ್ಥಾನ ಪರ ಬೌಲಿಂಗ್ ನಲ್ಲಿ ಯುಜುವೇಂದ್ರ ಚಹಾಲ್ 2 ವಿಕೆಟ್ ಹಾಗೂ ನಾಂದ್ರೆ ಬರ್ಗರ್ 1 ವಿಕೆಟ್ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್..!
ಸಿಎಸ್ಕೆ, ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಕಾಡೆ ಮಲಗಿದ್ದ ಆರ್ಸಿಬಿ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) RCB ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿರುವುದು. ಅಂದರೆ ಐಪಿಎಲ್ ಇತಿಹಾಸದಲ್ಲಿ 8 ಶತಕ ಬಾರಿಸಿ ದಾಖಲೆ ಬರೆದಿರುವ ಕೊಹ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಧಾನಗತಿಯಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 67 ಎಸೆತಗಳನ್ನು ಎಂಬುದು ವಿಶೇಷ.
ಐಪಿಎಲ್ನಲ್ಲಿ ನಿಧಾನಗತಿಯಲ್ಲಿ ಶತಕ ಸಿಡಿಸಿ ಕಳಪೆ ದಾಖಲೆ ಬರೆದಿದ್ದ ಮನೀಶ್ ಪಾಂಡೆ ಅವರ ಕೆಟ್ಟ ರೆಕಾರ್ಡ್ ಅನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಈ ಹೀನಾಯ ದಾಖಲೆಯ ಬೆನ್ನಲ್ಲೇ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಅಪಸ್ವರಗಳು ಕೇಳಿ ಬರಲಾರಂಭಿಸಿದೆ. ಬ್ಯಾಟಿಂಗ್ ಪಿಚ್ ಆಗಿದ್ದರೂ, ಮೊದಲ ಇನಿಂಗ್ಸ್ನಲ್ಲಿ ಯಾವುದೇ ಒತ್ತಡ ಇಲ್ಲದಿದ್ದರೂ ವಿರಾಟ್ ಕೊಹ್ಲಿ ಶತಕ ಪೂರೈಸಲು 67 ಎಸೆತಗಳನ್ನು ತೆಗೆದುಕೊಂಡಿದ್ದು ಆರ್ಸಿಬಿ ತಂಡದ ರನ್ ಗತಿಯ ಮೇಲೆ ಪರಿಣಾಮ ಬೀರಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಚೇಸಿಂಗ್ನ ಒತ್ತಡದಲ್ಲೂ 58 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ಕೊಹ್ಲಿ ಕೊನೆಯ ಓವರ್ಗಳ ವೇಳೆ ವೇಗದಿಂದ ಆಡದಿರುವುದು ಆರ್ಸಿಬಿ ತಂಡದ ಒಟ್ಟು ಸ್ಕೋರ್ ಮೇಲೆ ಪರಿಣಾಮ ಬೀರಿದೆ ಎಂದು ಕೆಲ ಅಭಿಮಾನಿಗಳ ವಾದ.
ಕೊಹ್ಲಿ 19ನೇ ಓವರ್ನಲ್ಲಿ ತಮ್ಮ ಶತಕ ಪೂರೈಸಲು ಹೆಚ್ಚಿನ ಒತ್ತು ನೀಡಿದ್ದರು. ಇದರಿಂದ ಆರ್ಸಿಬಿ ತಂಡದ ರನ್ ಗತಿಯು ಇಳಿಕೆಮುಖವಾಯಿತು ಎಂಬ ವಾದವನ್ನು ಮುಂದಿಡುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಇದೀಗ ಸ್ಲೋ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಸ್ಲೋ ಸೆಂಚುರಿ ಬೆನ್ನಲ್ಲೇ ಕೊಹ್ಲಿ ಇನಿಂಗ್ಸ್ ವಿರುದ್ಧ ಪರ ವಿರೋಧ ಚರ್ಚೆಗಳು ಶುರುವಾಗಿದೆ.