ಆರ್. ಅಶೋಕ್ ಆರೋಪಕ್ಕೆ ಟಾಂಗ್ ಕೊಟ್ಟ ಡಿ.ಕೆ. ಶಿವಕುಮಾರ್..!

ಬೆಂಗಳೂರು: ನಮಗೆ ರಾಜಕೀಯ ಪ್ರಜ್ಞೆ, ಶಿಷ್ಟಾಚಾರ ಪಾಲನೆ, ಯಾರಿಗೆ ಗೌರವ ನೀಡಬೇಕು ಎಂಬ ವಿಚಾರದಲ್ಲಿ ಬಿಜೆಪಿಯವರಿಗಿಂತಲೂ ಹೆಚ್ಚಿನ ಪರಿಜ್ಞಾನ ಇದೇ. ಬೇರೆ ರಾಜ್ಯಗಳ ತರಹ ನಾವು ಮಾಡುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯವಿದ್ದರು ನಾವು ಪ್ರಧಾನಿಗೆ ಗೌರವ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸರ್ಕಾರದ ಪ್ರತಿನಿಧಿಗಳು ತೆರಳಿಲ್ಲ ಎಂಬ ಬಿಜೆಪಿ ಶಾಸಕ ಆರ್. ಅಶೋಕ್ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ಧಾರೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಆರ್.ಅಶೋಕ್ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂಬುದಕ್ಕೆ ಅವರು ಆಡಿರುವ ಮಾತುಗಳೇ ಸಾಕ್ಷಿ. ನಾವು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಿದ್ದರಿದ್ದೆವು. ಆದರೆ, ಪ್ರಧಾನಿ ಕಚೇರಿಯಿಂದ ಬಂದ ಸಂದೇಶವನ್ನು ಗೌರವಿಸಿ ಅವರ ಸ್ವಾಗತಕ್ಕೆ ತೆರಳಿಲ್ಲ. ಈ ಕುರಿತಂತೆ ಆರ್.ಅಶೋಕ್ ಅವರು ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದುಕೊಂಡು ಆ ನಂತರ ಮಾತನಾಡಲಿ ಎಂದಿದ್ದಾರೆ.
ಶಿಷ್ಟಾಚಾರದ ಪ್ರಕಾರ ಪ್ರಧಾನಿ ಅವರನ್ನು ಸ್ವಾಗತಿಸಲು ಸರ್ಕಾರ ಸಿದ್ದವಿತ್ತು. ಆದರೆ, ಪ್ರಧಾನಿ ಕಚೇರಿಯಿಂದ ನಮಗೆ ಬರಬಾರದೆಂದು ಅನಧಿಕೃತವಾಗಿ ಸಂದೇಶ ಬಂದಿತ್ತು. ನಾವು ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ನೀಡುವಂತೆ ಹೇಳಿದ್ದೆವು. ನಂತರ ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಯಾರು ಸ್ವಾಗತ ಮಾಡಲು ಬರುವುದು ಬೇಡ ಎಂದು ಪತ್ರ ಕಳುಹಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಯಾರು ತೆರಳಲಿಲ್ಲ. ಅಶೋಕ್ ಅವರು ಮಾತನಾಡುವ ಮುನ್ನ ಈ ಬಗ್ಗ ಚೆನ್ನಾಗಿ ತಿಳಿದುಕೊಳ್ಳಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.
ನಾವು ಪ್ರಧಾನಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಅವರು ನಮ್ಮ ವಿಜ್ಞಾನಿಗಳನ್ನು ಸನ್ಮಾನಿಸಲು ಬಂದಿದ್ದಾರೆ. ಅವರಿಗೆ ನಾವು ಸ್ವಾಗತ ಬಯಸುತ್ತೇವೆ. ನಮಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಉದ್ಧೇಶವಿಲ್ಲ. ರಾಜಕೀಯದ ಆಟ ಮುಗಿದಿದ್ದು, ಈಗ ಏನಿದ್ದರು ಅಭಿವೃದ್ದಿಯತ್ತ ಗಮನಹರಿಸಬೇಕಿದೆ. ರಾಜ್ಯದ ಘನತೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ.
ಆರ್.ಅಶೋಕ್ ಅವರಿಗೆ ಈ ವಿಚಾರವಾಗಿ ಮಾಹಿತಿ ಇಲ್ಲ ಎಂದು ಕಾಣುತ್ತಿದೆ. ಪ್ರಧಾನಿ ಮಂತ್ರಿಗಳ ಕಚೇರಿ ಅವರನ್ನು ರಾಜಕೀಯ ಚಿತ್ರಣದಿಂದ ದೂರವಿಟ್ಟಿದೆ. ಹೀಗಾಗಿ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಏನಾದರು ಸಮಸ್ಯೆ ಇರಬಹುದು ಎಂದು ಆರ್.ಅಶೋಕ್ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.