ಶೀಘ್ರದಲ್ಲೇ ಪೆಟ್ರೋಲ್ ಬೆಲೆ 50 ರೂ.ಗೆ ಇಳಿಯಲಿದೆ; ನಿತಿನ್ ಗಡ್ಕರಿ.!
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ರಾಜ್ಯದಲ್ಲಿ 13,458 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ ಚಾಲನೆ ದೊರೆತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ನಡೆದ ಎರಡು ಕಾರ್ಯಕ್ರಮಗಳ ಮೂಲಕ ಹೆದ್ದಾರಿ ಕ್ರಾಂತಿಗೆ ಅಡಿಗಲ್ಲಿಟ್ಟರು. ಇದೇ ವೇಳೆ ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ 50 ರೂ.ಗಳಿಗೆ ಇಳಿಯಲಿದೆ ಎಂದರು.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಈ 8 ಜಿಲ್ಲೆಗಳ 376 ಕಿ.ಮೀ ಉದ್ದದ ರಸ್ತೆಗಳಿಗೆ 7290 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಈ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ಎಂದರು.
ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್ ಲಭ್ಯವಾಗಲಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್ನ್ನು ಡೀಸೆಲ್ನಲ್ಲಿ ಉಪಯೋಗಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.
ಕರ್ನಾಟಕ ಆರ್ಥಿಕವಾಗಿ ಮುಂದುವರಿದಿದೆ. ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಅನಿಲ ಬಳಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಎಲೆಕ್ಟ್ರಾನಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಆಗ ಪೆಟ್ರೋಲ್ 50 ರೂಪಾಯಿಗೆ ಸಿಗುತ್ತದೆ ಎಂದು ಹೇಳಿದರು.
ರಾಘವೇಂದ್ರ ಅವರು ಸಾಗರದಿಂದ ಮರಕುಟುಕಕ್ಕೆ ರಸ್ತೆ ಕೇಳಿದ್ದಾರೆ. ಅದಕ್ಕೆ ಅನುಮೋದನೆ ನೀಡುತ್ತೇನೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು, ಅಧಿಕಾರಿಗಳು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿದರು.
ಕರ್ನಾಟಕಕ್ಕೆ ಸಾಕಷ್ಟು ರಸ್ತೆಗಳನ್ನು ನೀಡಿದ್ದೇನೆ, ಇನ್ನಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಟು ಚೆನೈ ಎಕ್ಸ್‌ಪ್ರೆಸ್ ರಸ್ತೆ ಶ್ರೀಘ್ರದಲ್ಲೇ ಮುಕ್ತಾಯವಾಗುತ್ತದೆ. ಆಗ ಆಗ ಎರಡು ಗಂಟೆಯಲ್ಲಿ ಚೆನ್ನೈ ತಲುಪಬಹುದು ಎಂದು ಹೇಳಿದರು.