Onion price: 100 ರ ಗಡಿಯತ್ತ ತಲುಪಿತ್ತಿರುವ ಈರುಳ್ಳಿ ಬೆಲೆ...!
Onion Price : ಅಖಿಲ ಭಾರತ ಮಟ್ಟದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈರುಳ್ಳಿಯ ಚಿಲ್ಲರೆ ದರವು ಶೇ. 57ರಷ್ಟು ಏರಿಕೆ ಕಂಡಿದೆ. ದಿಲ್ಲಿಯಲ್ಲಿ ಕೆ.ಜಿಗೆ. 40 ರೂ. ಇದ್ದರೆ, ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 60 – 70 ರೂ.ಗೆ ಮಾರಾಟವಾಗುತ್ತಿದೆ. ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ದರ ಏರಿಕೆಯ ಕಾವು ತಗ್ಗಿಸಲು ಕೇಂದ್ರ ಸರಕಾರವು ರಿಟೇಲ್ ಮಾರುಕಟ್ಟೆಯಲ್ಲಿ 25 ರೂ.ನಂತೆ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಮುಂದಾಗಿದೆ.ಆದರೆ ದಿನನಿತ್ಯ ಏರಿಕೆಯ ಹಾದಿ ಹಿಡಿಯುತ್ತಿರುವ ಈರುಳ್ಳಿ ಬೆಲೆ (onion price) ನೂರರ ಗಡಿ ತಲುಪು ಅನುಮಾನವೇ ಇಲ್ಲ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಈರುಳ್ಳಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಶುಕ್ರವಾರ ಪ್ರತಿ ಕೆ.ಜಿಗೆ 47 ರೂ.ಗೆ ಏರಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಕೆ.ಜಿಗೆ 30 ರೂ. ಇತ್ತು.
“ನಾವು ಆಗಸ್ವ್ ತಿಂಗಳ ಮಧ್ಯದಿಂದ ಈರುಳ್ಳಿ ದಾಸ್ತಾನನ್ನು ಚಿಲ್ಲರೆ ಮಾರುಕಟ್ಟೆಗೆ ಹೆಚ್ಚಿನದಾಗಿ ಬಿಡುಗಡೆ ಮಾಡುತ್ತಾ ಬಂದಿದ್ದೇವೆ. ಬೆಲೆಯಲ್ಲಿ ಮತ್ತಷ್ಟು ಏರಿಕೆಯನ್ನು ತಡೆಯಲು ಮತ್ತು ಗ್ರಾಹಕರಿಗೆ ಪರಿಹಾರವನ್ನು ಒದಗಿಸಲು ನಾವು ಚಿಲ್ಲರೆ ಮಾರಾಟವನ್ನು ಹೆಚ್ಚಿಸುತ್ತಿದ್ದೇವೆ,” ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ‘ಪಿಟಿಐ’ಗೆ ತಿಳಿಸಿದ್ದಾರೆ.
ಸಚಿವಾಲಯದ ಪ್ರಕಾರ, ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿರುವ ರಾಜ್ಯಗಳಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ದಾಸ್ತಾನು ಮಳಿಗೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಆಗಸ್ವ್ ಮಧ್ಯದಿಂದ ಸುಮಾರು 1.7 ಲಕ್ಷ ಟನ್ ಈರುಳ್ಳಿಯನ್ನು 22 ರಾಜ್ಯಗಳಲ್ಲಿ ವಿವಿಧ ಸ್ಥಳಗಳಿಗೆ ಕಳಿಸಲಾಗಿದೆ.
ದರ ಏರಿಕೆ ಏಕೆ?
ಹವಾಮಾನ ಕಾರಣಗಳಿಂದ ಮುಂಗಾರು ಈರುಳ್ಳಿ ಬಿತ್ತನೆ ವಿಳಂಬವಾಗಿದ್ದು, ಕಡಿಮೆ ವ್ಯಾಪ್ತಿಯಲ್ಲಿ ಬೆಳೆಯಿದೆ. ಅಲ್ಲದೇ, ಮಳೆ ಕೊರತೆಯಿಂದಾಗಿ ಬೆಳೆ ತಡವಾಗಿ ಬರಲು ಕಾರಣವಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
* ಈಗಷ್ಟೇ ತಾಜಾ ಮುಂಗಾರು ಈರುಳ್ಳಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ಬಂದಿಲ್ಲ. ಸಂಗ್ರಹಿಡಿಸಲಾಗಿದ್ದ ಹಿಂಗಾರು ಈರುಳ್ಳಿ ಖಾಲಿಯಾಗಿದೆ. ಮುಂಗಾರು ಈರುಳ್ಳಿ ಬೆಳೆ ವಿಳಂಬವಾಗಿದ್ದು, ಸರಬರಾಜು ಕೊರತೆಯಾಗಿದೆ. ಇದರ ಪರಿಣಾಮವಾಗಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯಾಗಿದೆ.
* ಪ್ರಸಕ್ತ ವರ್ಷ ಸರಕಾರವು ಈರುಳ್ಳಿ ಕಾಪು ದಾಸ್ತಾನನ್ನು ದ್ವಿಗುಣಗೊಳಿಸಿದೆ. ಇದು ಈರುಳ್ಳಿಯ ದೇಶೀಯ ಲಭ್ಯತೆಯನ್ನು ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದೆ.