ಕರ್ನಾಟಕ ಸೇರಿದಂತೆ ಹಲವು ಮೊಬೈಲ್ ಸ್ಟೋರ್ ಗಳಲ್ಲಿ ಒನ್ ಪ್ಲಸ್ ಫೋನ್ ಮಾರಾಟ ಸ್ಥಗಿತ; ಕಾರಣವೇನು?
![ಕರ್ನಾಟಕ ಸೇರಿದಂತೆ ಹಲವು ಮೊಬೈಲ್ ಸ್ಟೋರ್ ಗಳಲ್ಲಿ ಒನ್ ಪ್ಲಸ್ ಫೋನ್ ಮಾರಾಟ ಸ್ಥಗಿತ; ಕಾರಣವೇನು?](https://urtv24.com/wp-content/uploads/2024/04/whatsappimage2024-04-11at10-25-09am1-1712811468.jpeg)
ಮೇ 1 ರಿಂದ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಸೇಲ್ ಅನ್ನು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ 4,500 ಕ್ಕೂ ಹೆಚ್ಚು ಆಫ್‌ಲೈನ್ ಸ್ಟೋರ್‌ಗಳಲ್ಲಿ ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಯಾರು ಹಾಗೂ ಯಾಕೆ ಈ ನಿರ್ಧಾರ ಮಾಡಲಾಗಿದೆ? ಇದರಿಂದ ಒನ್‌ಪ್ಲಸ್‌ಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಸ್ಟೋರ್‌ಗಳಲ್ಲಿ ಒನ್‌ಪ್ಲಸ್ ಫೋನ್ ಇರೋಲ್ಲ: ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯಾದ ಒನ್‌ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಹಿನ್ನಡೆಯನ್ನು ಎದುರಿಸುತ್ತಿದೆ. ಮೇ 1, 2024 ರಿಂದ ಜಾರಿಗೆ ಬರುವಂತೆ ಕಂಪನಿಯು ದಕ್ಷಿಣ ಭಾರತದ ಹಲವಾರು ರಾಜ್ಯಗಳಾದ್ಯಂತ ಆಫ್‌ಲೈನ್ ರಿಟೇಲರ್ ಸ್ಟೋರ್‌ಗಳ (Offline retailer store) ಮೂಲಕ ತನ್ನ ಉತ್ಪನ್ನಗಳನ್ನು ಸೇಲ್ ಮಾಡುವುದನ್ನು ನಿಲ್ಲಿಸುತ್ತದೆ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರಮುಖ ಕಾರಣ ಏನೆಂದರೆ ಕಡಿಮೆ-ಲಾಭದ ಮಾರ್ಜಿನ್‌ಗಳು ಮತ್ತು ಬಗೆಹರಿಯದ ಗ್ರಾಹಕ ಸೇವಾ ಕಾಳಜಿ. ಈ ಬಗ್ಗೆ ರಿಟೇಲರ್ ಸ್ಟೋರ್‌ಗಳ ವ್ಯಾಪಾರಿಗಳು ದೂರು ಸಲ್ಲಿಕೆ ಮಾಡಿದ್ದು, ಇದರ ಹಿನ್ನೆಲೆ ಈ ನಿರ್ಧಾರ ಹೊರಬಿದ್ದಿದೆ ಎಂದು ತಿಳಿದುಬಂದಿದೆ. ಈ ಕ್ರಮವು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿನ ಪೂರ್ವಿಕಾ ಮೊಬೈಲ್ಸ್ ಮತ್ತು ಸಂಗೀತಾ ಮೊಬೈಲ್ ಸೇರಿದಂತೆ ಪ್ರಮುಖ ರಿಟೇಲರ್ ಸ್ಟೋರ್ ಒಳಗೊಂಡಂತೆ 4,500ಕ್ಕೂ ಹೆಚ್ಚು ಮಳಿಗೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಈ ಸಂಬಂಧ ಮನಿಕಂಟ್ರೋಲ್ ವರದಿ ಮಾಡಿದೆ. ಅಲ್ಲಿ ಸೌತ್ ಇಂಡಿಯನ್ ಆರ್ಗನೈಸ್ಡ್ ರೀಟೇಲರ್ಸ್ ಅಸೋಸಿಯೇಷನ್ (ORA) ಒನ್‌ಪ್ಲಸ್ ಇಂಡಿಯಾದ ಮಾರಾಟದ ನಿರ್ದೇಶಕ ರಂಜೀತ್ ಸಿಂಗ್ ಅವರಿಗೆ ಏಪ್ರಿಲ್ 10 ರಂದು ಪತ್ರವನ್ನು ಕಳುಹಿಸಿದೆ ಎಂದು ಉಲ್ಲೇಖಿಸಲಾಗಿದೆ. ವಾರಂಟಿ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ವಿಳಂಬ ಮತ್ತು ಗ್ರಾಹಕ ಸೇವಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒನ್‌ಪ್ಲಸ್ ನಿಂದ ಬೆಂಬಲದ ಕೊರತೆ ಸೇರಿದಂತೆ ರಿಟೇಲರ್ ಸ್ಟೋರ್ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ದುರಂತ ಎಂದರೆ ಮುಂಬೈ ಮತ್ತು ದೆಹಲಿಯಲ್ಲಿ ತನ್ನ ಇತ್ತೀಚಿನ ಸ್ಟೋರ್ ವಿಸ್ತರಣೆಗಳೊಂದಿಗೆ ಆಪಲ್ ಸೇರಿದಂತೆ ಅನೇಕ ಕಂಪನಿಗಳು ವ್ಯಾಪಕ ಗ್ರಾಹಕರ ನೆಲೆಯನ್ನು ಕಂಡುಕೊಳ್ಳಲು ಮುಂದಾಗುತ್ತಿವೆ. ಜೊತೆಗೆ ಆಫ್‌ಲೈನ್ ಉಪಸ್ಥಿತಿಯನ್ನು ಸಕ್ರಿಯವಾಗಿ ಹೆಚ್ಚಿಗೆ ಮಾಡಿಕೊಳ್ಳುತ್ತಿವೆ. ಆದರೆ, ಈಗ ಒನ್‌ಪ್ಲಸ್ ವಿಚಾರದಲ್ಲಿ ಇದು ಒನ್‌ಪ್ಲಸ್‌ಗೆ ದೊಡ್ಡ ಹೊಡೆತ ನೀಡುವುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ದೇಶದಲ್ಲಿ ಗ್ರಾಹಕರ ಪ್ರವೇಶಕ್ಕೆ ಸಂಭವನೀಯ ಅಪಾಯವನ್ನು ಎತ್ತಿ ತೋರಿಸುತ್ತಿದೆ.
ಒನ್‌ಪ್ಲಸ್‌ಗೆ ಮುಂದಿರುವ ಸವಾಲುಗಳೇನು: ಇನ್ನು ಒನ್‌ಪ್ಲಸ್ ಮುಂದಿರುವ ದಾರಿ ಏನೆಂದರೆ ರಿಟೇಲರ್ ಸ್ಟೋರ್ ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸುವುದೇ ಆಗಿದೆ. ಜೊತೆಗೆ ದಕ್ಷಿಣ ಭಾರತದ ಆಫ್‌ಲೈನ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಹೊಸ ಆದಾಯ ಮಾದರಿಗಳು ಅಥವಾ ಪಾಲುದಾರಿಕೆ ರಚನೆಗಳನ್ನು ಸಂಭಾವ್ಯವಾಗಿ ಅನ್ವೇಷಿಸುವ ಅಗತ್ಯ ಇದೆ. ಹಾಗೆಯೇ ರಿಟೇಲರ್ ಸ್ಟೋರ್ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳಲು ಒನ್‌ಪ್ಲಸ್ ತಮ್ಮ ಗ್ರಾಹಕ ಸೇವಾ ಕಾರ್ಯತಂತ್ರಗಳನ್ನು ಮರು-ಮೌಲ್ಯಮಾಪನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.