ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಕ್ಕೂ ಹೆಚ್ಚು ಹೊಸ ಸರ್ಕಾರಿ ನೇಮಕಾತಿ ಆದೇಶಗಳನ್ನು ವಿತರಿಸಿದ್ದಾರೆ. ಮೋದಿ ಅವರು ಇಂದು ಜಮ್ಮುವಿಗೆ ಭೇಟಿ ನೀಡಿದ್ದು, ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಪ್ರಧಾನಿ ಚಾಲನೆ ನೀಡಿದ ಯೋಜನೆಗಳಿಗೆ ಅವರು ಕೂಡ ಸಾಕ್ಷಿಯಾಗಿದರು. ಮೋದಿ ಅವರು ‘ವಿಕಸಿತ್ ಭಾರತ್ ವಿಕಸಿತ್ ಜಮ್ಮು’ ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರೊಂದಿದೆ ಸಂವಾದ ನಡೆಸಲಿದ್ದಾರೆ.
ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯನ್ನು ಭಾರತ ಇಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಎಸ್ಇಆರ್ ತಿರುಪತಿ, ಐಐಐಟಿಡಿಎಂ ಕರ್ನೂಲ್ನ ಶಾಶ್ವತ ಕ್ಯಾಂಪಸ್ಗಳನ್ನು ದೇಶಕ್ಕೆ ನೀಡಿದ್ದಾರೆ.
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮೋದಿ ಭರಪೂರ ಯೋಜನೆ
ಇದರ ಜತೆಗೆ ಮೋದಿ ಕಾನ್ಪುರದಲ್ಲಿ ಸುಧಾರಿತ ತಂತ್ರಜ್ಞಾನಗಳ ಪ್ರವರ್ತಕ ಕೌಶಲ್ಯ ತರಬೇತಿ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಅನ್ನು ಅವರು ಉದ್ಘಾಟಿಸಲಿದ್ದಾರೆ. ಐಐಟಿ ಜಮ್ಮು, ಎನ್ಐಟಿ ದೆಹಲಿ, ಐಐಟಿ ಖರಗ್ಪುರ, ಎನ್ಐಟಿ ದುರ್ಗಾಪುರ, ಐಐಎಸ್ಇಆರ್ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ಗಳು, ಶೈಕ್ಷಣಿಕ ಬ್ಲಾಕ್ಗಳು, ಆಡಳಿತಾತ್ಮಕ ಕಟ್ಟಡಗಳು, ಗ್ರಂಥಾಲಯಗಳು, ಸಭಾಂಗಣಗಳಲ್ಲಿ ಸುಧಾರಿತ ಮೂಲಸೌಕರ್ಯಗಳನ್ನು ನೀಡಲಿದ್ದಾರೆ.
ಬೆಹ್ರಾಂಪುರ, ಎನ್ಐಟಿ ಅರುಣಾಚಲ ಪ್ರದೇಶ, ಐಐಐಟಿ ಲಕ್ನೋ, ಐಐಟಿ ಬಾಂಬೆ, ಐಐಟಿ ದೆಹಲಿ, ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಇಲ್ಲಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಇದೀಗ ಇದಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮೋದಿಯವರು ಯೋಜನೆಗಳನ್ನು ನೀಡಿದ್ದಾರೆ. ಸಿಂಧು ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು IIIT ರಾಯಚೂರಿನ ಶಾಶ್ವತ ಕ್ಯಾಂಪಸ್ ನಿರ್ಮಾಣ, ಐಐಟಿ ಬಾಂಬೆಯಲ್ಲಿ ಶೈಕ್ಷಣಿಕ ಬ್ಲಾಕ್, ಹಾಸ್ಟೆಲ್, ಫ್ಯಾಕಲ್ಟಿ ಕ್ವಾರ್ಟರ್ ಇತ್ಯಾದಿಗಳ ನಿರ್ಮಾಣ, IIT ಗಾಂಧಿನಗರದಲ್ಲಿ ಹಾಸ್ಟೆಲ್ ಮತ್ತು ಸ್ಟಾಫ್ ಕ್ವಾರ್ಟರ್ಸ್ ನಿರ್ಮಾಣ, BHU ನಲ್ಲಿ ಗರ್ಲ್ಸ್ ಹಾಸ್ಟೆಲ್ ನಿರ್ಮಾಣ ಮಾಡಲಿದ್ದಾರೆ.