ಹೊಚ್ಚ ಹೊಸ ಫೀಚರ್ಸ್ ದೊಂದಿಗೆ ಮಾರುಕಟ್ಟೆಗೆ ಕಾಲಿಡಲಿದೆ ಮಾರುತಿ ಸುಜುಕಿ ಸ್ವಿಪ್ಟ್..!
ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಬಹುನೀರಿಕ್ಷಿತ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ತಲೆಮಾರಿನ ಸ್ವಿಫ್ಟ್ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಸುಜುಕಿ ಕಂಪನಿಯು ಇದೀಗ ಕೆಲವು ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಗೂ ಅಭಿವೃದ್ದಿಪಡಿಸುತ್ತಿದೆ.
ಟೊಕಿಯೋ ಮೋಟಾರ್ ಶೋದಲ್ಲಿಅನಾವರಣಗೊಂಡಿದ್ದ ಹೊಸ ತಲೆಮಾರಿನ ಸ್ವಿಫ್ಟ್ ಕಾರು ಮಾದರಿಯು ಜಪಾನ್ ನಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದು ಮುಂಬರುವ 2024ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಯಾಗಲಿದೆ. ಜಪಾನ್ ನಲ್ಲಿ ಬಿಡುಗಡೆಯಾಗಿರುವ ಸ್ವಿಫ್ಟ್ ಮಾದರಿಯು ಭಾರತದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಇಂಧನ ದಕ್ಷತೆಯಲ್ಲಿ ಗಮನಸೆಳೆಯಲಿದೆ.
ಜಪಾನ್ ನಲ್ಲಿ ಬಿಡುಗಡೆಯಾಗಿರುವ ಹೊಸ ಸ್ವಿಫ್ಟ್ ನಲ್ಲಿ ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಹಿಂದಿನ ಸ್ವಿಫ್ಟ್ ಮಾದರಿಯಲ್ಲಿದ್ದ ಕೆ12 1.2 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಂತ್ರಜ್ಞಾನ ಪ್ರೇರಿತ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗೆ ಬದಲಾಯಿಸಲಾಗಿದ್ದು, ಇದು ಹಿಂದಿನ ಮಾದರಿಗಿಂತಲೂ ತುಸು ಕಡಿಮೆ ಹಾರ್ಸ್ ಪವರ್ ಹೊಂದಿದ್ದರೂ ಇಂಧನ ದಕ್ಷತೆಯಲ್ಲಿ ಸಾಕಷ್ಟು ಸುಧಾರಿಸಿದೆ.
ಹೊಸ ಸ್ವಿಫ್ಟ್ ಮಾದರಿಯಲ್ಲಿನ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಶೀಘ್ರದಲ್ಲಿಯೇ ಇದು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ 4×4 ಡ್ರೈವ್ ಸಿಸ್ಟಂ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.
ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ಮಾದರಿಯು ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮೈಲ್ಡ್ ಹೈಬ್ರಿಡ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎಎಂಟಿ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಪಡೆದುಕೊಳ್ಳಲಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಸ್ವಿಫ್ಟ್ ಸಹ ಜಪಾನ್ ಮಾರುಕಟ್ಟೆಯಲ್ಲಿನ ಮಾದರಿಯೆಂತೆಯೇ ಮೈಲೇಜ್ ನೀಡಲಿದ್ದು, ಇದು ಫ್ರಂಟ್ ಡ್ರೈವ್ ಸಿಸ್ಟಂ ಆಯ್ಕೆ ಮಾತ್ರ ಹೊಂದಿರಲಿದೆ.
ಇನ್ನು ಹೊಸ ಸ್ವಿಫ್ಟ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆ ಆಧರಿಸಿ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಪಡೆದುಕೊಂಡಿದೆ ಹೀಗಾಗಿ ಬೆಲೆಯಲ್ಲಿ ತುಸು ದುಬಾರಿಯಾಗಲಿರುವ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ರೂ. 10 ಲಕ್ಷ ಬೆಲೆ ಪಡೆದುಕೊಳ್ಳಬಹುದಾಗಿದ್ದು, ಇದು ಪ್ರಮುಖ ಹ್ಯಾಚ್ ಬ್ಯಾಕ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.