ಮಂಗಳೂರು: ಮನೆಯ ಚಪ್ಪರದಲ್ಲಿದ್ದ ಡೆಕೋರೆಷನ್ ವಸ್ತುಗಳಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ...!
ಮಂಗಳೂರು: ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳೂರು ನಗರ ಹೊರವಲಯದ ಬಜಾಲ್ ಪಲ್ಲಕೆರೆಯಲ್ಲಿ ಶುಕ್ರವಾರ ನಡೆದಿದೆ.
ಬಜಾಲ್ ಪಲ್ಲಕೆರೆ ನಿವಾಸಿ ಲಕ್ಷ್ಮೀನಾರಾಯಣ್ ಅವರು ಡೆಕೋರೇಷನ್ ವ್ಯವಹಾರ ನಡೆಸುತ್ತಿದ್ದು, ಡೆಕೋರೆಷನ್ ಗೆ ಬಳಸುವ ವಸ್ತುಗಳನ್ನು ಮನೆಯ ಮುಂಭಾಗದ ಚಪ್ಪರದಲ್ಲಿ ಇರಿಸಿದ್ದರು. ಮನೆಯಲ್ಲಿ ಲಕ್ಷ್ಮೀನಾರಾಯಣ್ ಅವರು ಇಲ್ಲದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬೆಂಕಿ ತಗುಲಿದೆ. ಈ ವೇಳೆ ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು, ಅವರು ನೋಡುವಷ್ಟರಲ್ಲಿ ಮನೆಯ ಮುಂಭಾಗ ಹಾಗೂ ಅಲ್ಲಿ ಇರಿಸಿದ್ದ ವಸ್ತುಗಳಿಗೆ ಬೆಂಕಿ ತಗುಲಿತ್ತು.
ಲಕ್ಷ್ಮೀನಾರಾಯಣ್ ಅವರ ಪತ್ನಿ ಬೊಬ್ಬೆ ಹಾಕುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ಮನೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳ ಸೇರಿ ಸುಮಾರು 18ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ ಆಗಿದೆ ಎಂದು ತಿಳಿದುಬಂದಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್, ಕಾರ್ಪೊರೇಟರ್ ಅಶ್ರಫ್, ಸಂದೀಪ್, ಯುವವಾಹಿನಿ ಜಿಲ್ಲಾಧ್ಯಕ್ಷ ಹರೀಶ್ ಪೂಜಾರಿ, ಕಂಕನಾಡಿ ಗರೋಡಿ ಬಿಲ್ಲವ ಸಮಾಜ ಅಧ್ಯಕ್ಷ ದಿನೇಶ್ ಅಂಚನ್, ಎಪಿಎಂಸಿ ಮಾಜಿ ಸದಸ್ಯ ಭರತೇಶ್ ಅಮೀನ್ ಭೇಟಿ ನೀಡಿ ನೆರವು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.