ಉಪ್ಪಿನಂಗಡಿ: ಮಣಿನಾಲ್ಕೂರು ಬಾರೆತ್ಯಾರಿನಲ್ಲಿ ದೇಗುಲದ ಕುರುಹುಗಳು ಪತ್ತೆ
ಉಪ್ಪಿನಂಗಡಿ: ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಬಾರೆತ್ಯಾರಿನಲ್ಲಿ ಗಿಡಗಂಟಿಗಳಿಂದ ತುಂಬಿದ ಪೊದೆಗಳ ಮಧ್ಯೆ ಪುರಾತನ ಕಾಲದ ಶಿಲಾಮಯ ದೇಗುಲವೊಂದರ ಕುರುಹುಗಳು ಪತ್ತೆಯಾಗಿವೆ. ಅದು ಶಿವ ದೇವಾಲಯ ಎನ್ನಲಾಗುತ್ತಿದ್ದು, ಆದರೆ ದೇವಾಲಯದ ಇತಿಹಾಸವೇನು ಎಂಬುದು ಅಧ್ಯಯನದ ಬಳಕವೇ ತಿಳಿಯಬೇಕಿದೆ.
ಬಾರೆತ್ಯಾರು ನಿವಾಸಿ ಸುಜಾನಂದ ರೈ ಅವರ ಭೂಮಿಯಲ್ಲಿ ಈ ಕುರುಹು ಗಳಿದ್ದು, ಸುತ್ತಲೂ ಪೊದೆಗಳಿರು ವುದರಿಂದ ಮೇಲ್ನೋಟಕ್ಕೆ ಯಾವುದೂ ಕಾಣದಿದ್ದರೂ ಪೊದೆಗಳನ್ನು ಸರಿಸಿ ನೋಡಿದಾಗ ಆಶ್ಚರ್ಯಕರ ರೀತಿಯ ನಿರ್ಮಾಣಗಳು ಗೋಚ ರಿಸುತ್ತವೆ. ಕಳೆದ ಹಲವು ಸಮಯಗಳ ಹಿಂದೆ ಇಂತಹ ಕುರುಹು ಪತ್ತೆಯಾಗಿದ್ದು, ಸ್ಥಳೀಯವಾಗಿ ಯಾವುದೇ ಕ್ಷೇತ್ರದಲ್ಲಿ ಪ್ರಶ್ನೆ ಇಟ್ಟರೂ ಶಿಥಿಲಾವಸ್ಥೆಯಲ್ಲಿರುವ ಈ ದೇಗುಲ ಕುರಿತು ಪ್ರಸ್ತಾವ ಆಗಿಯೇ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಜತೆಗೆ ಅವುಗಳನ್ನು ಜೀರ್ಣೋ ದ್ಧಾರ ಮಾಡುವ ಸಂದರ್ಭದಲ್ಲಿ ಈ ಕುರುಹುಗಳ ಬಳಿ ಬಂದು ಪ್ರಾರ್ಥನೆ ಮಾಡಿರುವ ಉದಾಹರಣೆಗಳು ಕೂಡ ಇವೆ. ಆದರೆ ಇನ್ನೂ ಕೂಡ ಬಾರೆತ್ಯಾರಿನ ಪರಿಸರದ ಈ ದೇಗುಲದ ಕುರಿತು ಜೀರ್ಣೋದ್ಧಾರದ ಕುರಿತು ಪ್ರಯತ್ನಗಳೇ ನಡೆದಿಲ್ಲ ಎನ್ನಲಾಗುತ್ತಿದೆ.
ಶತಮಾನಗಳ ಹಿನ್ನೆಲೆ
ಕುರುಹುಗಳು ಪತ್ತೆಯಾದ ಸ್ಥಳ ದಲ್ಲಿ ಶತಮಾನಗಳ ಹಿನ್ನೆಲೆಯನ್ನು ಸಾದರಪಡಿಸುವ ಅಗಲವಾದ ಮುರಕಲ್ಲಿನಿಂದ ಕಟ್ಟಲಾದ ಪಂಚಾಂಗ ಗಳ ಕಲ್ಲುಗಳು ಪೊದೆಯ ಮಧ್ಯ ಭಾಗದಲ್ಲಿ ಅಲ್ಲಿಲ್ಲಿ ಕಾಣಿಸುತ್ತಿವೆ. ಜತೆಗೆ ಅಲ್ಲೇ ಪಕ್ಕದಲ್ಲಿ ಬಾವಿಯೊಂದಿದ್ದು, ಗಿಡಗಂಟಿಗಳ ಮಧ್ಯೆ ಇರುವ ಬಾವಿ ಈಗಲೂ ಸುಸ್ಥಿತಿಯಲ್ಲಿದೆ. ಸುಜಾನಂದ ರೈ ಅವರ ಮನೆ ಸಮೀಪ ಹಲವು ಚಪ್ಪಡಿ ಕಲ್ಲುಗಳಿದ್ದು, ಅವೆಲ್ಲವೂ ದೇಗುಲದ ಕಿಟಕಿ ದಾರಂದಗಳಾಗಿರುವ ಸಾಧ್ಯತೆಯ ಕುರಿತು ಅಭಿಪ್ರಾಯಿಸಲಾಗುತ್ತಿದೆ.
ಮಣಿನಾಲ್ಕೂರು, ಸರಪಾಡಿ ಗ್ರಾಮ ಗಳ ಸುತ್ತ ಮುತ್ತಲ ದೇವಸ್ಥಾನ, ದೈವಸ್ಥಾನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಶಿವದೇವಾಲಯವೊಂದಿದ್ದು, ಅದು ಈಗ ಶಿಥಿಲಾವಸ್ಥೆಯಲ್ಲಿದೆ ಎಂದು ಕಂಡುಬರುತ್ತಿತ್ತು. ಹೀಗಾಗಿ ಹಲ ವಾರು ಮಂದಿ ಈ ಕುರುಹು ಗಳಿದ್ದ ಸ್ಥಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಹೋಗು ತ್ತಿದ್ದಾರೆ. ಮುಂದಿನ ದಿನ ಗಳಲ್ಲಿ ಭಕ್ತರಿಂದ ಪ್ರಶ್ನಾ ಚಿಂತನೆಯ ಪ್ರಯತ್ನ ಗಳು ನಡೆದರೆ ದೇವಾ ಲಯದ ಸ್ಪಷ್ಟಚಿತ್ರಣ ತಿಳಿದು ಬರಬಹುದು. ಜತೆಗೆ ಇತಿಹಾಸಕಾರರು ಕೂಡ ಶಿಲೆಯಕುರಿತು ಅಧ್ಯಯನ ನಡೆಸಿದರೆ ಯಾವ ಕಾಲದಲ್ಲಿ, ಯಾರು ದೇವಾಲಯ ನಿರ್ಮಿಸಿದ್ದರು ಎಂಬುದರ ಕುರಿತು ಪುರಾವೆಗಳು ಸಿಗಬಹುದಾಗಿದೆ ಎಂದು ಸ್ಥಳೀಯ ನಿವಾಸಿ ವಿಶ್ವನಾಥ ಶೆಟ್ಟಿ ಹೇಳುತ್ತಾರೆ.
ಕುರುಹುಗಳ ಕುರಿತು ಪ್ರಶ್ನಾಚಿಂತನೆ ಇಡಲು ನಾವು ಶಕ್ತರಾಗಿಲ್ಲ, ಆ ಜಾಗದಲ್ಲಿ ದೇವಾಲಯ ನಿರ್ಮಾಣವಾಗಬೇಕು ಎಂದು ದೇವರು ಬಯಸಿದರೆ ಆ ಜಾಗ ದೇವರಿಗೆ ಸೇರಲಿ. ಪ್ರಸ್ತುತ ಸಾಕಷ್ಟು ಮಂದಿ ಇಲ್ಲಿಗೆ ಆಗಮಿಸಿ ಕುರುಹುಗಳನ್ನು ವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದಾರೆ.
– ಸುಜಾನಂದ ರೈ, ಕುರುಹು ಪತ್ತೆಯಾಗಿರುವ ಜಾಗದ ಮಾಲಕ