ಸುಳ್ಯ: ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ
ಸುಳ್ಯ: ಹಕ್ಕು ಖುಲಾಸೆಗೆ ಅರ್ಜಿ ವಿಲೇವಾರಿ ಮಾಡಲು ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಆಡಳಿತಾಧಿಕಾರಿ (ಗ್ರಾಮ ಕರಣಿಕ) ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಆ.19ರ ಶನಿವಾರ ನಡೆದಿದೆ.
ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಬಂಧಿತ ಅಧಿಕಾರಿ. ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಹರಿಪ್ರಸಾದ್ ಎಂಬವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಲೇವಾರಿ ಮಾಡಲು ಎಂಟು ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು, ಟ್ರ್ಯಾಕ್ ಲೇಯಿಂಗ್ ಆಫೀಸರ್ ಅಮಾರುಲ್ಲಾ ಸೇರಿದಂತೆ ಮತ್ತಿತರ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಹರಿಪ್ರಸಾದ್ ಎರಡು ದಿನಗಳ ಹಿಂದೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಅಧಿಕಾರಿಯನ್ನು ಬಲೆಗೆ ಕಡವಿದ್ದಾರೆ.
ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿ, ಬಂಧಿತ ಅಧಿಕಾರಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ.
1.32 ಕೋಟಿ ಮೌಲ್ಯದ ರೇಷನ್ ಅಕ್ಕಿ ನಾಪತ್ತೆ: ಬಂಟ್ವಾಳದ ಗೋಡೌನ್‌ನಲ್ಲಿ ಹಗರಣ ಪತ್ತೆ
ಬಂಟ್ವಾಳ: ಆಹಾರ ನಿಗಮದಿಂದ ನ್ಯಾಯಬೆಲೆ ಅಂಗಡಿ, ಸೊಸೈಟಿಗಳ ಮೂಲಕ ರೇಷನ್ ಕಾರ್ಡ್‌ದಾರರಿಗೆ ವಿತರಣೆಯಾಗಬೇಕಿದ್ದ 1.32 ಕೋಟಿ ರೂ. ಮೌಲ್ಯದ 3,892 ಕ್ವಿಂಟಾಲ್ ಅಕ್ಕಿ ಬಿ.ಸಿ.ರೋಡ್‌ನ ಗೋದಾಮಿನಿಂದ ನಾಪತ್ತೆಯಾಗಿದ್ದು, ದೂರು ದಾಖಲಾಗಿದೆ.
ಬಿ.ಸಿ.ರೋಡ್‌ನಲ್ಲಿರುವ ಮೂರು ಗೋದಾಮುಗಳಲ್ಲಿ ಅಧಿಕಾರಿಗಳು ದಾಸ್ತಾನು ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಸದ್ಯ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ರಿಷ್ಯಂತ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಇಲಾಖಾಧಿಕಾರಿಗಳ ಸಹಿತ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತಹಸೀಲ್ದಾರ್ ಎಸ್.ಬಿ. ಕೂಡಲಗಿ ಸಹಿತ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ”ಡಿಪೊ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಸ್ಪಿ ಜತೆ ಪರಿಶೀಲನೆ ನಡೆಸಿದ್ದೇವೆ. ಬಹಳ ದಿನಗಳಿಂದ ಈ ರೀತಿಯ ಕೃತ್ಯಗಳು ನಡೆದಿರಬಹುದು,” ಎಂದರು.
‘ಅಕ್ಕಿಯಲ್ಲಿವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿಅನುಮಾನದ ಮೇಲೆ ಆಹಾರ ನಿರೀಕ್ಷಕರು ತನಿಖೆ ಮಾಡಿದ್ದಾರೆ. ಆ ಸಂದರ್ಭ ದಾಸ್ತಾನು ಇರುವ ಅಕ್ಕಿಯ ಲೆಕ್ಕಾಚಾರದಲ್ಲಿವ್ಯತ್ಯಾಸ ಕಂಡುಬಂದ ಕಾರಣ ಲೆಕ್ಕ ಮಾಡಲಾಗಿದೆ. ದಾಸ್ತಾನು ಕೊಠಡಿಯಲ್ಲಿಯಾಕೆ ಈ ತರಹದ ವ್ಯತ್ಯಾಸ ಆಗಿದೆ ಎಂಬುದರ ಮೇಲೆ ಡಿಪೋ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾವ ರೀತಿ ವ್ಯತ್ಯಾಸ ಕಂಡುಬಂದಿದೆ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿದ ಬಳಿಕ ಸಂಪೂರ್ಣ ಚಿತ್ರಣ ಸಿಗಲಿದೆ. ಬಹಳ ದಿನಗಳ ಸಮಸ್ಯೆ ಇರಬಹುದು. ಕೆಎಸ್‌ಎಫ್‌ಸಿಯ ರಾಜ್ಯಮಟ್ಟದ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುತ್ತಾರೆ,” ಎಂದರು.
ಅಧಿಕಾರಿಗಳು ನೀಡಿದ ದೂರಿನಲ್ಲಿ ಏನಿದೆ?
ದಾಸ್ತಾನು ಕೊಠಡಿಯಲ್ಲಿಸುಮಾರು 1,32,360,30 ಕೋಟಿ ರೂ. ಮೌಲ್ಯದ, 3,892 ಕಿಂಟ್ವಾಲ್ ಅಕ್ಕಿ ಕೊರತೆ ಕಂಡುಬಂದಿದ್ದು, ಅವ್ಯವಹಾರ ನಡೆದಿರಬೇಕು ಎಂಬ ದೂರಿನ ಮೇಲೆ ಬಂಟ್ವಾಳ ನಗರ ಠಾಣೆ ಎಸ್‌ಐ ರಾಮಕೃಷ್ಣ, ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಹಾಗೂ ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಎಂಬವರು ದೂರು ನೀಡಿದ್ದು, ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕೆಎಸ್‌ಆರ್‌ಟಿಸಿ ಡಿಪೋ ಎದುರು ಇರುವ ಸಗಟು ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತದೆ.
ಪಡಿತರ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆ.17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿಇರಬೇಕಾಗಿದ್ದ ಭೌತಿಕ ದಾಸ್ತಾನಿಗಿಂತ ಅಂದಾಜು 1,32,36,030 ರೂ. ಮೌಲ್ಯದ 3,892 ಕ್ವಿಂಟಾಲ್ ಅಕ್ಕಿ ಕೊರತೆ ಇರುವುದು ಕಂಡು ಬಂದಿದೆ.
ಈ ಬಗ್ಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬಂಟ್ವಾಳ ಗೋದಾಮಿನ ನಿರ್ವಾಹಕರಾಗಿದ್ದ ಕಿರಿಯ ಸಹಾಯಕರ ವಿರುದ್ಧ ದೂರು ನೀಡಿದ್ದು, ಬಂಟ್ವಾಳ ನಗರ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.