ಸುಳ್ಯ: ಆಸ್ತಿ ವಿವಾದ ಸಂಬಂಧ ಅಣ್ಣನ ಹತ್ಯೆ ಮಾಡಿದ ಸಹೋದರರನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು
ಸುಳ್ಯ, ಜು 16: ಆಸ್ತಿ ವಿವಾದಕ್ಕೆ ಸಂಬಂಧಿಸಿದ ಚಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿಗಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಉಸ್ಮಾನ್ ಸಹೋದರರಾದ ರಫೀಕ್ ಮತ್ತು ಸತ್ತಾರ್ ಬಂಧಿತ ಆರೋಪಿಗಳು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ಉಸ್ಮಾನ್ ರನ್ನ ಚೂರಿಯಿಂದ ಇರಿದು ಜುಲೈ 14ರಂದು ಕೊಲೆ ಮಾಡಿ ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು.
ಸಹೋದರರಾಗಿದ್ದ ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣ -ತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಕಾಗದ ಅಳತೆ ಮಾಡಿಸುವ ಕಾರ್ಯದ ನಿಮಿತ್ತ ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ.
ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ.