ಸ್ಕೂಟರ್, ಓಮ್ನಿ ಡಿಕ್ಕಿ- ಸ್ಕೂಟರ್ ಸವಾರ ದಾರುಣ ಸಾವು..!
ಮುಲ್ಕಿ: ಯುವಕನೋರ್ವ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಓಮ್ನಿ ಕಾರೊಂದು ಢಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಲ್ಕಿ ಸಮೀಪದ ಕಾರ್ನಾಡ್ ಗೇರುಕಟ್ಟೆಯಲ್ಲಿ ನಡೆದಿದೆ.
ಕಾರ್ನಾಡ್ ಅಮೃತಾನಂದ ಮಯಿ ನಗರ ನಿವಾಸಿ ಪ್ರಜ್ವಲ್ (21) ಸ್ಕೂಟಿ ಸವಾರ ಮೃತ ಯುವಕ ಎಂದು ಗುರುತಿಸಲಾಗಿದೆ.
ಪ್ರಜ್ವಲ್ ಬಪ್ಪನಾಡು ಬಳಿಯ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿದ್ದು, ತುರ್ತು ಕೆಲಸದ ನಿಮಿತ್ತ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಓಮ್ನಿ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಪ್ರಜ್ವಲ್ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಈ ಭಾಗದಲ್ಲಿ ರಸ್ತೆ, ಚರಂಡಿ ಅವ್ಯವಸ್ಥೆ ಅಪಘಾತಕ್ಕೆ ಕಾರಣವಾಗಿದ್ದು, ಹಿಂದಿನ ದಿನದ ರಾತ್ರಿ ಸ್ಕೂಟರ್ ನಲ್ಲಿ ದಂಪತಿಗಳಿಬ್ಬರು ಹೋಗುತ್ತಿರುವಾಗ ನಿಯಂತ್ರಣ ತಪ್ಪಿ, ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಓಮ್ನಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ತೀವ್ರ ಬಡತನದಲ್ಲಿರುವ ಮೃತ ಯುವಕ ಪ್ರಜ್ವಲ್ ಕುಟುಂಬ ನಡೆದ ಘಟನೆಯಿಂದ ತತ್ತರಿಸಿ ಹೋಗಿದೆ.
ಮೃತ ಯುವಕ ಪ್ರಜ್ವಲ್ ನಾರಾಯಣ ಗುರು ಚಲನಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದನು.
ಮಂಗಳೂರು: ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಸೆರೆ
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕು ಫೈಸಲ್ ನಗರದ ತಲ್ಲತ್ (39) ಬಂಧಿತ ಆರೋಪಿ.
ಆರೋಪಿಯು ಹಲ್ಲೆ, ಕೊಲೆಯತ್ನ, ಅಪಹರಣ, ಹಫ್ತಾ ವಸೂಲಿ, ದರೋಡೆ, ಕೊಲೆ ಸಹಿತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಆರೋಪಿ 2004ನೇ ಇಸವಿಯಲ್ಲಿ ಹಲ್ಲೆ ಪ್ರಕರಣ ನಂತರ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆ ಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಆರೋಪಿ ಪತ್ತೆ ಕಾರ್ಯವನ್ನು ಕೈಗೊಂಡಿದ್ದರು.