ಮಂಗಳೂರು: ಅಪರೂಪದ ಈಲ್ ಮೀನು ಪತ್ತೆ
ಸುರತ್ಕಲ್: ಸಮುದ್ರದ ಆಳದಲ್ಲಿ ವಾಸಿಸುವ ಲಿಯೊಪೋರ್ಡ್ ಹನಿಕೋಂಬ್ ಈಲ್ (ಕನ್ನಡದಲ್ಲಿ ಅರೋಳಿ ಮೀನು) ಎಂದು ಕರೆಯಲ್ಪಡುವ ಅಪರೂಪದ ಮೀನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ತುಳು ಭಾಷೆಯಲ್ಲಿ ಮರಞ್ಞ ಮೀನು ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ವಿಷಪೂರಿತವಾಗಿರುವುದರಿಂದ ಸ್ಥಳೀಯರು ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲು ಪ್ರದೇಶದ ಎಡೆಯಲ್ಲಿ ಇದ್ದುಕೊಂಡು ಸಣ್ಣಮೀನುಗಳನ್ನು ಭಕ್ಷಿಸುತ್ತಾ ಬದುಕುತ್ತದೆ. ಗುಡ್ಡಕೊಪ್ಲ ಬಳಿಯ ಸಮುದ್ರ ತೀರದಲ್ಲಿ ಮೂರ್‍ನಾಲ್ಕು ಅಡಿ ಉದ್ದದ ಮೀನು ಪತ್ತೆಯಾಗಿದ್ದು, ಸ್ಥಳೀಯರಾದ ಅನುಪಮ ಶಿವರಾಂ ಅವರು ಗಮನಿಸಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮಲ್ಪೆಯ ರೋಹಿತ್ ಮೆಂಡನ್ ಕೊಡವೂರು ಅವರ, ಪ್ರಕಾರ ಮಲ್ಪೆ ಬಳಿ ಇದು ಅಪರೂಪಕ್ಕೆ ಗಾಳಕ್ಕೆ ಬೀಳುತ್ತದೆ. ಕಲ್ಲುಗಳಿರುವಲ್ಲಿ ಮಾತ್ರ ಇರುತ್ತದೆ. ಹಲ್ಲುಗಳು ಹರಿತವಾಗಿರುತ್ತವೆ ಎಂದಿದ್ದಾರೆ.
ಕರಾವಳಿ: 2,756 ಶಿಕ್ಷಕರ ಕೊರತೆ!ಹುದ್ದೆ ಭರ್ತಿಗೆ ಮೀನಾಮೇಷ
ಮಂಗಳೂರು: ಸರಕಾರಿ ಶಾಲೆ ಅಭಿವೃದ್ಧಿಗೆ ಆದ್ಯತೆ ಎಂದು ಸರಕಾರ ಹೇಳುತ್ತಲೇ ಇದೆ; ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2,756 ಶಿಕ್ಷಕರ ಕೊರತೆಯಿದೆ!
ಉಭಯ ಜಿಲ್ಲೆಗಳ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ ಎಂಬ ಆತಂಕದ ಮಧ್ಯೆಯೇ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಖ್ಯವಾದ ಶಿಕ್ಷಕರ ನೇಮಕಾತಿಯೇ ಪೂರ್ಣವಾಗಿ ನಡೆಯದಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಪೈಕಿ 4,447 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 2,916 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ, 1,531 ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 1,404 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 340 ಹುದ್ದೆ ಖಾಲಿ ಇವೆ.
ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ 2,425 ಹುದ್ದೆಗಳ ಪೈಕಿ 1,744 ಮಂದಿ ಕರ್ತವ್ಯದಲ್ಲಿದ್ದು, 681 ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 1,053 ಹುದ್ದೆಗಳು ಮಂಜೂರಾಗಿದ್ದು, 204 ಹುದ್ದೆ ಖಾಲಿ ಇವೆ.
ಎರಡೂ ಜಿಲ್ಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಸರಿದೂಗಿಸಲು ಇಲಾಖೆಯು ಅತಿಥಿ ಶಿಕ್ಷಕರ ನೇಮಕದಂತಹ ತಾತ್ಕಾಲಿಕ ಕ್ರಮ ಗಳನ್ನು ಕೈಗೊಂಡಿದೆ. ಆದರೆ ಹುದ್ದೆಗಳ ಭರ್ತಿಗೆ ಮಾತ್ರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.
ಈ ಬಗ್ಗೆ ಶಿಕ್ಷಣ ಇಲಾಖೆ ಅಧಿ ಕಾರಿಗಳನ್ನು ವಿಚಾರಿಸಿದಾಗ ಶಿಕ್ಷಕರ ನೇಮಕ ವಿಚಾರ ರಾಜ್ಯ ಮಟ್ಟದಲ್ಲಿ ಆಗುವಂತಹುದು. ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗೆ ಖಾಲಿ ಇರುವ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎನ್ನುತ್ತಾರೆ. ಪ್ರೌಢಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಸರಕಾರಿ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಇಲಾಖಾ ಪ್ರಮುಖರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನು ಗುಣವಾಗಿ ಶಿಕ್ಷಕರ ನೇಮಕ ಆಗದೆ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆ ಎದುರಾಗಿದೆ. ಈ ಪೈಕಿ 6, 7 ಹಾಗೂ 8ನೇ ತರಗತಿಗೆ ಕೆಲವು ಹೊಸ ಶಿಕ್ಷಕರು ಬರುವುದಾದರೂ 1ರಿಂದ 5ನೇ ತರಗತಿಗಳ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕವೂ ತುರ್ತಾಗಿ ನಡೆಯಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ.
ಉಭಯ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಇಲಾಖೆ ಪೂರಕ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 6ರಿಂದ 8ನೇ ತರಗತಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಕೊನೆಯ ಹಂತದಲ್ಲಿದೆ.
– ದಯಾನಂದ ನಾಯಕ್, ಗಣಪತಿ ಕೆ.
ಡಿಡಿಪಿಐ, ದ.ಕ. ಹಾಗೂ ಉಡುಪಿ