ಮಂಗಳೂರು: ಗಾಂಜಾ ಸಹಿತ ಇಬ್ಬರನ್ನು ಬಂಧಿಸಿದ ಪೊಲೀಸರು
ಮಂಗಳೂರು, ಜು 27 : ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಸ್ಕೂಟರ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬ್ದುಲ್ ರಹೀಂ ಮತ್ತು ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಅಂದಾಜು ರೂ. 1,67,000 ಮೌಲ್ಯದ ಒಟ್ಟು 3 ಕೆಜಿ 378 ಗ್ರಾಂ ತೂಕದ ಗಾಂಜಾ, ತೂಕಮಾಪನ, ನಗದು ಹಣ 4,940 ಹಾಗೂ ರೂ. 50,000 ಮೌಲ್ಯದ ಆಕ್ಟಿವ ಹೋಂಡಾ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು (ಅ. ಸ) ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ಮಂಗಳೂರು ನಗರ ರವರ ಮಾರ್ಗದರ್ಶನಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ರವರು ಸಿಬ್ಬಂದಿಗಳಾದ ಎಎಸ್‌ಐ ದಾಮೋದರ, ಹೆಚ್ ಸಿ 929 ಮದನ್, ಹೆಚ್ ಸಿ 663 ಸತೀಶ್, ಪಿಸಿ 3238 ಸಂಪತ್, ಪಿಸಿ 311 ಸುನಿಲ್ ಮತ್ತು ಪಿಸಿ 3264 ಗುರು ಬಿ ಟಿ ರವರ ಜೊತೆ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಂಗಳೂರು: ಸುಲಿಗೆ ಪ್ರಕರಣ – 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು, ಜು 27 : ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಉಳ್ಳಾಲ ನಿವಾಸಿ ಆರೋಪಿ ಬಶೀರ್ ಎಂದು ಗುರುತಿಸಲಾಗಿದೆ.
2000ರಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಸುಲಿಗೆ ಮಾಡಿ ಪರಾರಿಯಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಹುಸೇನ್ @ ಮೊಹಮ್ಮದ್ ಹುಸೇನ್ ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರುಗಳಿದ್ದು ಹುಸೇನ್ @ ಮೊಹಮ್ಮದ್ ಹುಸೇನ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರನ್ನು ದಸ್ತಗಿರಿ ಮಾಡಲಾಗಿತ್ತು. ಆದರೆ ಆರೋಪಿ ಬಶೀರ್ ಎಂಬಾತ ತಲೆ ಮರೆಸಿಕೊಂಡಿದ್ದು ಈತನ ವಿರುದ್ದ ನ್ಯಾಯಾಲಯವು ಉದ್ಘೋಷಣೆಯನ್ನು ಹೊರಡಿಸಿತ್ತು. ಆದರೆ ಆರೋಪಿಯು ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಇದೀಗ ಆರೋಪಿಯನ್ನು ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.