ಕಾರ್ಕಳ: ಹಿರಿಯ ಪತ್ರಕರ್ತ ಮತ್ತು ಸಾಹಿತಿ ಶೇಖರ್ ಅಜೆಕಾರು ಹೃದಯಘಾತದಿಂದ ನಿಧನ!
ಕಾರ್ಕಳ : ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರು (54) ಅವರು ಅ. 31ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಂಗಳವಾರ ಬೆಳಿಗ್ಗೆ ಕಾರ್ಕಳ ಅಜೆಕಾರಿನ ತನ್ನ ಮನೆಯಲ್ಲಿ ಕುಸಿದು ಬಿದ್ದ ಶೇಖರ್ ಅವರನ್ನು ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿಯಾದ್ರೂ ಆ ವೇಳೆಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಟಿಯಂಥ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದ ಶೇಖರ ಅಜೆಕಾರು ಮುಂಬಯಿಯಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದವರು. ಮುಂಬಯಿಯ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಅವರು ಬಳಿಕ ಮಂಗಳೂರಿನ ಜನವಾಹಿನಿಗೆ ಸೇರಿದ್ದರು. ಅನಂತರ ಕನ್ನಡ ಪ್ರಭ ಸಹಿತ ಕೆಲವು ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇತ್ತೇಚೆಗಿನ ಕೆಲವು ವರ್ಷಗಳಿಂದ ಪತ್ರಿಕೋದ್ಯಮ ಬಿಟ್ಟು ಪೂರ್ಣವಾಗಿ ಸಾಹಿತ್ಯ ಮತ್ತು ಸಂಘಟನೆಯ ಕೆಲಸಗಳಲ್ಲಿ ತೊಡಗಿದ್ದರು.
ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದ ಶೇಖರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಚಿಕ್ಕಮಗಳೂರು : ವಾರಂಟ್ ಜಾರಿ ಮಾಡಿದ್ರೂ ಕೋರ್ಟಿಗೆ ಹಾಜರಾಗದ ರೌಡಿ ಶೀಟರ್ ಪೂರ್ಣೇಶ್ ಗೆ ಪೊಲೀಸ್ ಗುಂಡೇಟು..!
ಚಿಕ್ಕಮಗಳೂರು: ವಾರಂಟ್ ಜಾರಿಯಾಗಿದ್ದರೂ ಕೋರ್ಟಿಗೆ ಹಾಜರಾಗದ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ.
ಆರೋಪಿಯನ್ನು ಪೂರ್ಣೇಶ್ (31) ಮೇಲೆ ಬಾಳೆಹೊನ್ನೂರು ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಸುಮಾರು ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಪೂರ್ಣೇಶ್ ನನ್ನು ಬಂಧಿಸಲು ಕೋರ್ಟ್ ವಾರಂಟ್ ಹೊರಡಿಸಿತ್ತು.
ಖಚಿತ ಮಾಹಿತಿ ಮೇರೆಗೆ ಆತ ಅವಿತುಕೊಂಡಿದ್ದ ಸ್ಥಳವನ್ನು ಪೊಲೀಸರು ಸುತ್ತುವರೆದು ಶರಣಾಗಲು ಸೂಚಿಸಿದ್ದರೂ ಈ ವೇಳೆ ಪೊಲೀಸ್ ಸಿಬ್ಬಂದಿ ಮಂಜುನಾಥ್ ಮೇಲೆ ರೌಡಿ ಪೂರ್ಣೇಶ್ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದಾಗ ಪೋಲೀಸರ ಪ್ರಾಣ ರಕ್ಷಣೆ ಉದ್ದೇಶದಿಂದ ಆರೋಪಿಯ ಕಾಲಿಗೆ ಪಿ.ಎಸ್.ಐ.ದಿಲೀಪ್ ಕುಮಾರ್ ಫೈರಿಂಗ್ ಮಾಡಿದ್ದಾರೆ. ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪೂರ್ಣೇಶ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.