ಬೆಳ್ತಂಗಡಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡಿದ ಬಳಿಕ ಮಗು ಸಾವನ್ನಪ್ಪಿದ ಘಟನೆ: ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ
ಬೆಳ್ತಂಗಡಿ: ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡಿದ ಬಳಿಕ ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಗಳ 1.5 ತಿಂಗಳ ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಮಗು.
ಮಗುವನ್ನು ತಾಯಿ ಸವಿತಾ ನೆರಿಯದ ತನ್ನ ಅಕ್ಕ ಲೀಲಾವತಿ ಅವರ ಮನೆಯಲ್ಲಿದ್ದುಕೊಂಡು ಆರೈಕೆ ಮಾಡಿಕೊಂಡಿದ್ದರು. ಆಗಸ್ಟ್ 8 ರಂದು ಮಗುವಿಗೆ ಕಫದ ಸಮಸ್ಯೆ ಕಾರಣಕ್ಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲೆ ಮಾಡಿದ್ದಾರೆ. ಆದರೆ ವೈದ್ಯರು ಇಲ್ಲದ ವೇಳೆ ನರ್ಸ್ ಗಳು ಮಗುವಿಗೆ ಇಂಜೆಕ್ಷನ್ ಮಾಡಿದ್ದಾರೆ. ಇಂಜೆಕ್ಷನ್ ಮಾಡಿದ ಕೆಲ ಸಮಯದಲ್ಲಿ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆ ನಡೆದ ಬೆನ್ನಲ್ಲೇ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಆಸ್ಪತ್ರೆಗೆ ದೌಡಾಯಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಗುವಿನ ತಂದೆಗೆ ಪೋಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಉಡುಪಿ: ಡಿಸಿ, ಕೋರ್ಟ್ ಆದೇಶವಿದ್ದರೂ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡಲು ನಿರ್ಲಕ್ಷ್ಯ ತೋರಿದ ಮೆಸ್ಕಾಂ
ಉಡುಪಿ, ಆ 09: ವಿದ್ಯುತ್ ಸಂಪರ್ಕ ಇಲ್ಲದೆ ಹಲವಾರು ವರ್ಷ ಕಳೆದಿರುವ ಬಡ ಕುಟುಂಬಕ್ಕೆ ಸರಕಾರದ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜಿಲ್ಲಾಧಿಕಾರಿ, ನ್ಯಾಯಾಲಯ ಆದೇಶ ನೀಡಿದ್ದರೂ ಮೆಸ್ಕಾಂ ನಿರ್ಲ್ಯಕ್ಷ ತೋರಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಸೌಕೂರಿನ ನಿವಾಸಿ ಗಣೇಶ್ ದೇವಾಡಿಗ, ಮಾಲತಿ ದೇವಾಡಿಗ ದಂಪತಿ ವಿದ್ಯುತ್ ಸಂಪರ್ಕ ಪಡೆಯಲು ಇಲ್ಲಿಯವರೆಗೆ ಸಾಕಷ್ಟು ನೋವು, ಸಂಕಟ ಅನುಭವಿಸಿದ್ದಾರೆ. ಮಾಲತಿ ಅವರ ತಾಯಿ ಸುಬ್ಬಮ್ಮ ಕತ್ತಲಲ್ಲಿಯೇ ಜೀವನ ಕಳೆದು 2010ರಲ್ಲಿ ಮೃತಪಟ್ಟರು.
ಮಾಲತಿ ಅವರು 2019 ‘ಬೆಳಕು’ ಯೋಜನೆಯಡಿ ಫಲಾನುಭವಿ ಯಾಗಿ ಆಯ್ಕೆಗೊಂಡಿದ್ದು, ಮೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕಕ್ಕೆ ವಯರಿಂಗ್ ಕೆಲಸ, ಕಂಬ ಅಳವಡಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡು ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಮುಂದಾದಾಗ ಮಾಲತಿ ಅವರ ಪಕ್ಕದ ಮನೆಯ ವಾಸುದೇವ ದೇವಾಡಿಗ ಎಂಬವರು ತನ್ನ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಬಾರದು ಎಂದು ಆಕ್ಷೇಪಣೆ ಸಲ್ಲಿಸಿದ ಕಾರಣ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡುವ ಕೆಲಸವನ್ನು ಕೈಬಿಟ್ಟಿತ್ತು.
2020ರಲ್ಲಿ ಮಾಲತಿ ಅವರು ನೀಡಲು ಜಿಲ್ಲಾಧಿಕಾರಿಗಳಿಗೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ ವಿದ್ಯುತ್ ಸಂಪರ್ಕ ಪಡೆಯಲು ಇರುವ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿ ಆಕ್ಷೇಪದಾರರ ಸ್ವತ್ತುಗಳಿಗೆ ಹಾನಿಯಾಗದಂತೆ ಮಾಲತಿ ದೇವಾಡಿಗ ಅವರ ಮನೆಗೆ ಸಂಪರ್ಕ ನೀಡಲು ಆದೇಶ ನೀಡಿದ್ದರು. ಅದನ್ನು ಒಪ್ಪದ ವಾಸುದೇವ ದೇವಾಡಿಗ ಅವರು ತಡೆಯಾಜ್ಞೆ ಕೋರಿ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶಿಸಿತು. ಈ ಆದೇಶದ ಮೇಲೆ ವಾಸುದೇವ ಮತ್ತೆ ಕುಂದಾಪುರದ ಹಿರಿಯ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದರು. ಅದನ್ನೂ ನ್ಯಾಯಾಲಯ ತಿರಸ್ಕರಿಸಿತು ಎಂದು ಡಾ| ಶಾನುಭಾಗ್ ತಿಳಿಸಿದರು.
ಮಾಲತಿ ಪರವಾಗಿ ಬಂದಿದ್ದ ಮೂರು ಆದೇಶಗಳನ್ನು ಸಂಯೋಜಿಸಿ 2022ರ ನವೆಂಬರ್‌ನಲ್ಲಿ ಮೆಸ್ಕಾಂಗೆ ಪತ್ರ ಬರೆಯಲಾಗಿತ್ತು. ಖಾಸಗಿ ವ್ಯಕ್ತಿಯ ಆಕ್ಷೇಪಣೆಯಿಂದ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಮತ್ತು ಡಿಸಿ ಅವರ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಡಾ| ರವೀಂದ್ರನಾಥ್ ಶಾನುಭಾಗ್ ಅವರು ಕೋರ್ಟ್, ಡಿಸಿ ಆದೇಶಕ್ಕೆ ಬೆಲೆ ಇಲ್ಲವೇ ? ಎಂದು ಪ್ರಶ್ನಿಸಿದರು. ಆದೇಶವಿದ್ದರೂ ತಲ್ಲೂರಿನ ಮೆಸ್ಕಾಂ ಎಇಇ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಟುಂಬ ಸಂಕಷ್ಟದಲ್ಲಿದೆ. ಇಂತಹ ನೂರಾರು ಪ್ರಕರಣಗಳು ಜಿಲ್ಲೆಯಲ್ಲಿದ್ದು, ಈ ಬಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ವರದಿ ಸಲ್ಲಿಸಿದ್ದೇವೆ. ಕೋರ್ಟ್, ಕಚೇರಿ ಅಲೆದಾಟಕ್ಕಾಗಿ ಬಡ ಕುಟುಂಬ ಸಾವಿರಾರು ರೂ. ವ್ಯಯಿಸಿದ್ದು ಇದನ್ನು ಮೆಸ್ಕಾಂ ಅಧಿಕಾರಿಗಳಿಂದಲೇ ವಸೂಲಿ ಮಾಡಲು ಕಾನೂನು ಹೋರಾಟ ಆರಂಭಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂತ್ರಸ್ಥೆ ಮಾಲತಿ ದೇವಾಡಿಗ, ಗಣೇಶ್ ದೇವಾಡಿಗ ದಂಪತಿ, ಪುತ್ರಿ ರೇಣುಕಾ ದೇವಾಡಿಗ, ವೈಕುಂಠ ಬಾಳಿಗಾಕಾನೂನು ಕಾಲೇಜಿನ ನಿರ್ದೇಶಕಿ ಪ್ರೊಫೆಸರ್ ಡಾಕ್ಟರ್ ನಿರ್ಮಲಾ ಕುಮಾರಿ, ನ್ಯಾಯವಾದಿ ಬಿ. ಪದ್ಮನಾಭ ರಾವ್, ಪ್ರತಿಷ್ಠಾನದ ಟ್ರಸ್ಟಿ ರಮೇಶ್ ಶೆಣೈ, ಕಾರ್ಯದರ್ಶಿ ಅನುರಾಗ್ ಕಿಣಿ, ಅನಿಲ್ ದೇವಾಡಿಗ ಇದ್ದರು.