ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ..!
ಬಂಟ್ವಾಳ : ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಸೋಮವಾರ ಮುಂಜಾನೆ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೃತನನ್ನು ಸೂರಿಕುಮೇರ್ ನಿವಾಸಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿಯನ್ನು ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಗೈದಿರಬೇಕು ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಅಲ್ಲಿ ಸೇರಿದವರು ಮೃತನನ್ನು ಗುರುತಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ನೋಟದಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಷ್ಟೆ.
ವಿಟ್ಲ – ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದ ಬೈಕ್ ಸವಾರ – ರಕ್ಷಣೆ ಮಾಡಿದ ಸ್ಥಳೀಯರು
ವಿಟ್ಲ ಸೆಪ್ಟೆಂಬರ್ 30: ಸೇತುವೆಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ.
ಹೊಳೆಗೆ ಬಿದ್ದ ವ್ಯಕ್ತಿಯನ್ನು ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಹರ್ಷವರ್ಧನ್ ಭಟ್(55) ಎಂದು ಗುರುತಿಸಲಾಗಿದೆ. ಹರ್ಷವರ್ಧನ್ ಮಂಜಾನೆ 4 ಗಂಟೆ ಸಂದರ್ಭ ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನ ನಿಯಂತ್ರಣ ತಪ್ಪಿ ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಸಂದರ್ಭ ಸವಾರ 40ಅಡಿ ಆಳದ ಹೊಳೆಗೆ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಹುಡುಕತೊಡಗಿದಾಗ ಐವತ್ತು ಮೀಟರ್ ದೂರದಲ್ಲಿ ಹೊಳೆ ಮಧ್ಯೆ ನೀರಿನಲ್ಲಿ ಬೊಬ್ಬೆ ಹೊಡೆಯುವ ಶಬ್ದ ಕೇಳಿಸಿದೆ. ತಕ್ಷಣವೇ ಹೊಳೆ ನೀರಿಗೆ ಹಾರಿದ ಯುವಕರು ವ್ಯಕ್ತಿಯನ್ನು ಮೇಲಕ್ಕೆತ್ತಿ ರಸ್ತೆಗೆ ತಂದು ವಿಚಾರಿಸಿದಾಗ ತನ್ನ ಪರಿಚಯ ತಿಳಿಸಿದ್ದಾರೆ. ಗಾಯಾಳು ಹರ್ಷವರ್ಧನ್ ಭಟ್ ರನ್ನು ಉಪಚರಿಸಿದ ಯುವಕರು ಆಟೋ ಮೂಲಕ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.