wayanadu ಯುವತಿ ನೀರಿನಲ್ಲಿ ಮುಳುಗಿ ಸಾವು: ಬೆಳ್ಳಂಬೆಳಗ್ಗೆಯೇ ತಂದೆಯೊಂದಿಗೆ ಈಜಲು ಹೋದ 19 ವರ್ಷದ ಯುವತಿ ನೀರಿನಲ್ಲಿ ಮುಳುಗಿ ಸಾವು!

wayanadu ಯುವತಿ ನೀರಿನಲ್ಲಿ ಮುಳುಗಿ ಸಾವು: ತಂದೆಯ ಜತೆ ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ವಯನಾಡಿನ (wayanadu) ಅಂಬಲವ್ಯಾಲದಲ್ಲಿ ಸೋಮವಾರ (ಜು.24) ಬೆಳಗ್ಗೆ ನಡೆದಿದೆ.
ಸೋನಾ (19) ಮೃತ ದುರ್ದೈವಿ. ಈಕೆ ಕುಂಬಳೇರಿ ಕ್ರಷರ್ ಬಳಿ ವಾಸವಾಗಿರುವ ಪುಳುಕುಡಿಯಿಲ್ ವರ್ಗೀಸ್ ಮತ್ತು ಶೀಜಾ ದಂಪತಿಯ ಪುತ್ರಿ. ಮನೆಯ ಸಮೀಪವೇ ಇರುವ ಕೃಷಿ ಉದ್ದೇಶಕ್ಕಾಗಿ ಮಣ್ಣನ್ನು ಅಗೆದು ನಿರ್ಮಾಣ ಮಾಡಿದ್ದ ಹೊಂಡದಲ್ಲಿ ಈ ಘಟನೆ ನಡೆದಿದೆ.
ತಂದೆಯ ಜತೆ ಈಜುವಾಗ ಮಣ್ಣಿನಲ್ಲಿ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೇ ಸೋನಾ ಕೊನೆಯುಸಿರೆಳೆದಿದ್ದಾಳೆ. ಇದಕ್ಕೂ ಮುನ್ನ ಸ್ಥಳೀಯರಿಗೆ ಈ ಮಾಹಿತಿ ತಿಳಿದು ಸೋನಾಳನ್ನು ಕಾಪಾಡಲು ಸ್ಥಳಕ್ಕೆ ದೌಡಾಯಿಸಿದರೂ ಸಹ ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ತಂದೆಯಿಂದಲೂ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸಂಜೆ 7ರ ಸಮಯದಲ್ಲಿ ಸೋನಾಳ ಮೃತದೇಹವನ್ನು ಹೊಂಡದಿಂದ ತೆಗೆದು, ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಸೋನಾ, ಸುಲ್ತಾನ್ ಬತೇರಿಯಲ್ಲಿರುವ ಸೆಂಟ್ ಮೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದಳು.
ಪ್ರೀತಿಯಿಂದ ಸಾಕಿ ಸಲುಹಿದ್ದ ಮಗಳ ದುರಂತ ಸಾವು ಕಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸೋನಾಳ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ.
ಮಂಗಳೂರು: ಗಮನ ಬೇರೆಡೆ ಸೆಳೆದು ಬ್ಯಾಗ್ ಕಳವು
ಮಂಗಳೂರು: ಗಮನ ಬೇರೆ ಕಡೆಗೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳವು ಮಾಡಿದ ಘಟನೆ ನಗರದ ಪಿವಿಎಸ್ ವೃತ್ತದ ಬಳಿ ಸೋಮವಾರ ಸಂಭವಿಸಿದೆ.
ಮಹಿಳೆಯೋರ್ವರು ಬೆಳಗ್ಗೆ 10.30ಕ್ಕೆ ಪಿವಿಎಸ್ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂಭಾಗದಲ್ಲಿ ಕಾರು (Car) ನಿಲ್ಲಿಸಿ ಕಾರು ಸರ್ವೀಸ್ ಸೆಂಟರ್‌ಗೆ (Service center) ಕರೆ ಮಾಡಿ ಮಾತನಾಡುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೋರ್ವ ಬಂದು 10 ರೂ. ನೋಟನ್ನು ಅವರ ಕಾರಿನ ಎಡಭಾಗದಲ್ಲಿ ಹಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ.
ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಕಾರಿನ ಬಲಬದಿಯಲ್ಲಿಯೂ ನೋಟು ಇರುವುದಾಗಿ ತಿಳಿಸಿದ. ಮಹಿಳೆ ಅದನ್ನು ಹೆಕ್ಕಿ ನೀಡಲು ಹೋದಾಗ ಮತ್ತೋರ್ವ ಅಪರಿಚಿತ ಎಡಭಾಗದಿಂದ ಕಾರಿನ ಡ್ರೈವರ್ ಸೀಟಿನಲ್ಲಿದ್ದ 20,000 ರೂ. ನಗದು, ಕ್ರೆಡಿಟ್ ಕಾರ್ಡ್, ಬೀಗದ ಕೀ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.