ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಫರಂಗಿಪೇಟೆಯಲ್ಲಿ ಪತ್ತೆ

ಬಂಟ್ವಾಳ: ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ (Bangalore) ಕಳವಾಗಿದ್ದ ಬೈಕ್ ಫರಂಗಿಪೇಟೆಯಲ್ಲಿ (Farangipete) ವಾಹನ ತಪಾಸಣೆಯ ವೇಳೆ ಪತ್ತೆಯಾಗಿದ್ದು, ಬಂಟ್ವಾಳ (Bantwala) ಸಂಚಾರ ಪೊಲೀಸರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್ ನೇತೃತ್ವದಲ್ಲಿ ಸಂಚಾರ ಪೊಲೀಸರು ಜು. 21ರ ಸಂಜೆ ಫರಂಗಿಪೇಟೆಯಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭ ಕೆಟಿಎಂ ಡ್ನೂಕ್ ಬೈಕ್ ಆಗಮಿಸಿದ್ದು, ಅದನ್ನು ಪೊಲೀಸರು ನಿಲ್ಲಿಸುತ್ತಿದ್ದಂತೆ ಸವಾರ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಬೈಕನ್ನು (Bike) ವಶಪಡಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಬೈಕಿನ ನಂಬರ್ ಪ್ಲೇಟ್ ಬದಲಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಅದರ ಎಂಜಿನ್ ಸಂಖ್ಯೆಯನ್ನು ನೋಡಿದಾಗ ಅದು ಬೆಂಗಳೂರು ಮೂಲದ ಬೈಕ್ ಎಂದು ತಿಳಿದುಬಂದಿದ್ದು, 2021ರಲ್ಲಿ ಬೆಂಗಳೂರಿನಿಂದ ಕಳವಾಗಿರುವ ಕುರಿತು ಮಾಹಿತಿ ದೊರಕಿದೆ. ಮುಂದೆ ಬಂಟ್ವಾಳ ಪೊಲೀಸರು ಬೈಕನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ಮುಳುಗು ಸೇತುವೆಯಲ್ಲಿ ಸಿಲುಕಿಕೊಂಡ ಪಿಕ್ ಅಪ್ ವಾಹನ :
ವಿಟ್ಲ: ಕೆದಿಲ ಗ್ರಾಮದ ಕಾಂತುಕೋಡಿಯ ಮುಳುಗು ಸೇತುವೆಯೊಂದರಲ್ಲಿ ಪಿಕಪ್ ವಾಹನವೊಂದು ಸಿಲುಕಿ ಹಾಕಿಕೊಂಡಿರುವ ನಡೆದಿದೆ.
ಕೆದಿಲ ಬೀಟಿಗೆ ಹಾಲಿನ ಸೊಸೈಟಿ ಮೂಲಕ ಕಾಂತುಕೋಡಿ ಆಗಿ ಪಡೀಲಿಗೆ ಸಂಪರ್ಕ ಮಾಡುವ ರಸ್ತೆಯ ಕಾಂತುಕೋಡಿ ಎಂಬಲ್ಲಿನ ಸೇತುವೆಯೊಂದು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿದೆ
ಈ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕ್ ಅಪ್ ಚಾಲಕರೋರ್ವರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಾಸಿಗಳು ಅದರೊಳಗಡೆ ಸಿಲುಕಿರುವವರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಿಕ್ ಅಪ್ ವಾಹನವು ಪಡೀಲು ಬಾಗದಿಂದ ಕೆದಿಲ ಭಾಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೆರೆ:
ಬಂಟ್ವಾಳ: ನೇತ್ರಾವತಿ ನದಿಯ ನೀರಿನ ಮಟ್ಟ ಬೆಳಿಗ್ಗೆಯಿಂದ ನಿಧಾನವಾಗಿ ಏರಿಕೆಯಾಗುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತಾಲೂಕಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಆಲಡ್ಕ ದಲ್ಲಿರುವ ಸುಮಾರು 9 ಮನೆಗೆ ನೀರು ನುಗ್ಗಿದೆ. ಮತ್ತು ಶಾರದ ವಿದ್ಯಾಲಯದ ಮಕ್ಕಳ ಆಟದ ಅಂಗಳ ಹಾಗೂ ಅಲ್ಲೇ ಸಮೀಪವಿರುವ ಅಡಿಕೆ ಕೃಷಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಈಗಾಗಲೇ ಮನೆಯವರಿಗೆ ಮನೆಖಾಲಿ ಮಾಡಲು ಇಲಾಖೆ ಸೂಚನೆ ನೀಡಿದೆ. ಹಾಗಾಗಿ ಮನೆ ಸಾಮಾಗ್ರಿ ಜೊತೆ ಮನೆಮಂದಿ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಎಸ್.ಐ.ರಾಮಕೃಷ್ಣ ಸ್ಥಳೀಯ ಪುರಸಭಾ ಸದಸ್ಯ ಸಿದ್ದೀಕ್ ನಂದಾವರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.