ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಲಾರಿ
Twitter
Facebook
LinkedIn
WhatsApp
ಬೆಳ್ತಂಗಡಿ: ಮಂಗಳೂರಿನಿಂದ ಕೊಟ್ಟಿಗೆಹಾರದ ಕಡೆಗೆ ಹೆಂಚುಗಳನ್ನು ಸಾಗಿಸುತ್ತಿದ್ದ ಲಾರಿ ಮುಂಡಾಜೆ ಸಮೀಪ ಮಗುಚಿ ಬಿದ್ದ ಘಟನೆ ನಡೆದಿದೆ. ಇದರಿಂದ ರಸ್ತೆಯಲ್ಲಿ ಕೆಲ ಸಮಯ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಸೇತುವೆ ಸಮೀಪ ಕಿರಿದಾದ ರಸ್ತೆಯಲ್ಲಿ ಲಾರಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆಯ ಬಲಬದಿಗೆ ಚಲಿಸಿ ಏಕಾಏಕಿ ಮಗುಚಿ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ಎತ್ತಿ ಸ್ಥಳಾಂತರಿಸಲಾಯಿತು.
ಇನ್ನು ಲಾರಿಯಲ್ಲಿ ಇದ್ದ ಹೆಂಚುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದರಿಂದ ಕೆಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬಿದ್ದ ಘಟನೆಯೂ ನಡೆಯಿತು. ಹೆಂಚಿನ ರಾಶಿ ಮೇಲೆ ಪ್ರಯಾಣಿಸಿದ ಕಾರೊಂದು ಸ್ವಲ್ಪದರಲ್ಲೇ ಅವಘಡದಿಂದ ಪಾರಾಗಿದೆ.