ಬಂಟ್ವಾಳ: ನಂದಾವರದ ಮೂವರನ್ನು ಬಂಧಿಸಿ ಪಟ್ನಾಕ್ಕೆ ಕರೆದೊಯ್ದ ಎನ್‌ಐಎ ತಂಡ
ಬಂಟ್ವಾಳ :ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಹಣಕಾಸಿ ನೆರವು ನೀಡಿದ್ದ ಆರೋಪದಡಿ ಬಂಟ್ವಾಳ ತಾಲೂಕಿನ ನಂದಾವರದ ಕೆಲವು ಮನೆಗಳಿಗೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಬಿಹಾರದ ಪಟ್ನಾಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾ. 5ರಂದು ನಂದಾವರಕ್ಕೆ ದಾಳಿ ನಡೆಸಿದ ಎನ್‌ಐಎ ತಂಡ ಒಟ್ಟು ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್ ಹಾಗೂ ಇಕ್ಬಾಲ್ ಎಂಬವರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ನಾಲ್ವರ ಪೈಕಿ ಓರ್ವನನ್ನು ಬಂಧಿಸಿಲ್ಲ. ಇನ್ನು ಆರೋಪಿಗಳನ್ನು ಎನ್‌ಐಎ ತಂಡ ಕಸ್ಟಡಿಗೆ ಪಡೆದಿದ್ದು ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಪಟ್ನಾಕ್ಕೆ ಕರೆದೊಯ್ದಿರುವುದಾಗಿ ವರದಿಯಾಗಿದೆ.
ನಂದಾವರದ ದಾಳಿಯ ಪ್ರಕರಣದಲ್ಲಿ ಪ್ರಧಾನ ಆರೋಪಿ ಯಾರು ಎಂಬುವುದು ಇನ್ನು ತಿಳಿದುಬಂದಿಲ್ಲ. ಬಿಹಾರದಲ್ಲಿ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಯ ಹಣಕಾಸಿನ ವ್ಯವಹಾರದ ಕುರಿತು ಎನ್‌ಐಎ ತನಿಖೆ ನಡೆಸಿದ ಸಂದರ್ಭದಲ್ಲಿ ನಂದಾವರದ ವ್ಯಕ್ತಿಯಿಂದ ಹಣ ಜಮೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.